ಶಿವಮೊಗ್ಗ:ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ ಪ್ರಕರಣ ಸಂಬಂಧ ಸಾಹಿತಿ ಕೆ.ಎಸ್.ಭಗವಾನ್ ಅವರಿಗೆ ಸಾಗರದ ಜೆಎಂಎಫ್ಸಿ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಭಗವಾನ್ ಸಾಗರದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಭಗವಾನ್ ರಚಿಸಿದ್ದ 'ರಾಮಮಂದಿರ ಏಕೆ ಬೇಡ?' ಎಂಬ ಕೃತಿ ಬಿಡುಗಡೆ ಮಾಡಬಾರದು ಎಂದು ಸಾಗರ ತಾಲೂಕಿನ ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದರು. ಈ ದೂರಿನ ಬಗ್ಗೆ ದೀರ್ಘಕಾಲದ ವಿಚಾರಣೆ ನಡೆಸಿದ ನ್ಯಾಯಾಲಯ, ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಿತ್ತು. ಅಲ್ಲದೆ, ಕಳೆದ ಡಿ. 2ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್ಪಿ ಮೂಲಕ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಸಮನ್ಸ್ ಜಾರಿಯಾಗಿದ್ದರೂ ಭಗವಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.