ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಪೋಸ್ಟ್ ಹಾಕಿದ್ದ ನಾಲ್ವರು ಅಪ್ರಾಪ್ತರ ಮೇಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸುಮೋಟೊ ಕೇಸ್ ದಾಖಲಿಸಿದ್ದಾರೆ. ಬಾಲಕರು ಕೊಲೆಯಾದ ಹರ್ಷನ ರಕ್ತದ ಮಡುವಿನಲ್ಲಿ ಮಲಗಿದ್ದ ಫೋಟೋ ಜೊತೆ ತಮ್ಮ ಫೋಟೊವನ್ನು ಇನ್ಸ್ಸ್ಟಾ ಖಾತೆಯಲ್ಲಿ ಹಾಕಿಕೊಂಡಿದ್ದರು.
ಹರ್ಷನ ರಕ್ತಸಿಕ್ತ ಫೋಟೋ ಹಂಚಿಕೊಂಡ ಆರೋಪ: ನಾಲ್ವರು ಬಾಲಕರ ವಿರುದ್ಧ ದೂರು - Complaint registered against four minor boys
ಶಿವಮೊಗ್ಗದಲ್ಲಿ ಇತ್ತೀಚೆಗೆ ಹತ್ಯೆಯಾದ ಹರ್ಷನ ರಕ್ತಸಿಕ್ತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರ ಬಂಧನಕ್ಕೆ ಶೋಧ ನಡೆಯುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಸಂಜೀವ್ ಕುಮಾರ್ ಅವರು ರೌಂಡ್ಸ್ ಮಾಡುವಾಗ ಹೊನ್ನಾಳಿ ರಸ್ತೆಯ ಬಳಿ ಕಂಡುಬಂದ ಈ ನಾಲ್ವರು ಬಾಲಕರು, ಓಡಲು ಪ್ರಾರಂಭಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಹಿಂಬಾಲಿಸಿ ಇಬ್ಬರನ್ನು ಹಿಡಿದು ಠಾಣೆಗೆ ಕರೆ ತಂದಿದ್ದಾರೆ.
ವಿಳಾಸ ಕೇಳಿದಾಗ ತಪ್ಪು ತಪ್ಪು ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅನುಮಾನ ಬಂದಿದ್ದರಿಂದ ಪೊಲೀಸರು ಓರ್ವನ ಮೊಬೈಲ್ ಪರಿಶೀಲಿಸಿದ್ದರು. ಈ ಸಂದರ್ಭದಲ್ಲಿ ಇನ್ಸ್ಟಾಗ್ರಾಮ್ನಲ್ಲಿ ರಕ್ತದ ಮಡುವಿನಲ್ಲಿ ಮಲಗಿರುವ ಹರ್ಷನ ಶವದ ಹಿಂದೆ ನಾಲ್ವರು ನಿಂತಿರುವಂತೆ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿರುವ ವಿಚಾರ ಗೊತ್ತಾಗಿದೆ.