ಶಿವಮೊಗ್ಗ: ಕಳೆದ ವರ್ಷ ಮಂಗನ ಕಾಯಿಲೆಯಿಂದ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರವಾಗಿ ಶಾಸಕ ಹರತಾಳು ಹಾಲಪ್ಪ ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ.
ಸಾಗರ ತಾಲೂಕು ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಗರ ಶಾಸಕ ಹಾಲಪ್ಪ ಎಂಟು ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರದ ಚೆಕ್ ವಿತರಣೆ ಮಾಡಿದರು. ಉಳಿದ ಕುಟುಂಬಗಳಿಗೆ ಆದಷ್ಟು ಬೇಗ ಚೆಕ್ ವಿತರಣೆ ಮಾಡಲಾಗುವುದು. ಇನ್ನೂ ಮಣಿಪಾಲ ಆಸ್ಪತ್ರೆಗೆ ಸರ್ಕಾರ ಬಾಕಿ ಉಳಿಸಿ ಕೊಂಡಿರುವ ಹಣವನ್ನು ಶೀಘ್ರದಲ್ಲೆ ಪಾವತಿ ಮಾಡುತ್ತದೆ ಎಂದರು.
ಮಂಗನಕಾಯಿಲೆಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ ಮೃತರ ಆತ್ಮಕ್ಕೆ ಶಾಂತಿ ದೂರಕಿಸುವ ಪ್ರಯತ್ನ ನಮ್ಮದು. ಕಳೆದ ವರ್ಷದಂತೆ ಮತ್ತೆ ರೋಗ ಹರಡದಂತೆ ಎಲ್ಲರೂ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕಿದೆ ಎಂದರು. ಈ ವೇಳೆ ಅರಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಬೇಬಿ ರಾಮಪ್ಪ, ಉಪಾಧ್ಯಕ್ಷೆ ಶಿವಮ್ಮ , ತಾಲೂಕು ಆರೋಗ್ಯಾಧಿಕಾರಿ ಡಾ.ರಾಜು , ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಹಾಜರಿದ್ದರು.
ಇನ್ನು ಕೆಎಫ್ಡಿ ಸಂಶೋಧನಾ ಲ್ಯಾಬ್ ಅನ್ನು ಸಾಗರದಲ್ಲೆ ಪ್ರಾರಂಭ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಸಾಗರದ ವರದಹಳ್ಳಿ ರಸ್ತೆಯಲ್ಲಿ 6 ಎಕರೆ ಭೂಮಿಯನ್ನು ಗುರುತು ಮಾಡಲಾಗಿದೆ. ಆದಷ್ಟು ಬೇಗ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದರು.