ಶಿವಮೊಗ್ಗ:ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಹಾಗೂ ನಂತರ ನಡೆದ ಗಲಭೆ ಸಂಬಂಧ ಪೊಲೀಸರು ಹಿಂದೂ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಕೋಟೆ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ಗಲಭೆಯಲ್ಲಿ ಏನೂ ಕೃತ್ಯ ಎಸಗದ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಎದುರು ಮುಸ್ಲಿಂ ಸಂಘಟನೆ ಪ್ರತಿಭಟಿಸುತ್ತಿದೆ.
ಶಿವಮೊಗ್ಗ ಗಲಭೆ ಪ್ರಕರಣ: ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ - ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ
ಕಳೆದ ತಿಂಗಳು ಶಿವಮೊಗ್ಗ ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಹಾಗೂ ಅಹಿತಕರ ಘಟನೆ ಸಂಬಂಧ ಪೊಲೀಸರು ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳು ನಗರದ ಕೋಟೆ ಠಾಣೆ ಹಾಗೂ ದೊಡ್ಡಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿವೆ.
![ಶಿವಮೊಗ್ಗ ಗಲಭೆ ಪ್ರಕರಣ: ಹಿಂದೂ, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ Hindu, Muslim organization Staged Protest](https://etvbharatimages.akamaized.net/etvbharat/prod-images/768-512-10138556-thumbnail-3x2-vicky.jpg)
ಡಿಸೆಂಬರ್ 3ರಂದು ಬಜರಂಗದಳ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ನಡೆದಿದ್ದು, ತದನಂತರ ಎರಡು ಕೋಮಿನ ನಡುವೆ ಶಿವಮೊಗ್ಗದಲ್ಲಿ ಗಲಭೆ ಉಂಟಾಗಿತ್ತು. ಈ ಸಂಬಂಧ ಶಿಮೊಗ್ಗ ಪೊಲೀಸರು, ಘಟನೆಗೆ ಸಂಬಂಧಪಟ್ಟಂತೆ ಎರಡೂ ಕೋಮಿಗೆ ಸೇರಿರುವ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ ಹಿಂದೂಪರ ಸಂಘಟನೆಗಳು ಕೋಟೆ ಠಾಣೆ ಮುಂದೆ ಧರಣಿ ನಡೆಸುತ್ತಿದ್ದು, ನಾಗೇಶ್ ಮೇಲೆ ಹಲ್ಲೆ ಮಾಡಿದವರನ್ನು ಬಿಟ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ಈ ಗಲೆಭೆ ನಡೆದ ದಿನ ನಗರದಲ್ಲಿ ಇಲ್ಲದೇ ಇರುವ ನಮ್ಮ ಸಮುದಾಯದ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮುಸ್ಲಿಂ ಸಂಘಟನೆ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದೆ. ಗಲಭೆ ಸಂಬಂಧ ಬಜರಂಗದಳದ ಸಂಚಾಲಕ ದಿನದಯಾಳ್ ಅವರನ್ನು ಪೊಲೀಸರು ಬಂಧಿಸಬೇಕು. ಬದಲಾಗಿ ನಮ್ಮ ಸಮುದಾಯದವರನ್ನು ಬಂಧಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.