ಶಿವಮೊಗ್ಗ: ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಹಕ್ಕುಪತ್ರ ನೀಡಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ಹೊರವಲಯದ ಗೋಪಿಶೆಟ್ಟಿಕೊಪ್ಪ ಹಾಗೂ ಗೋವಿಂದಪುರದಲ್ಲಿ ಪೂರ್ಣಗೊಂಡಿರುವ 288 ಮನೆಗಳ ಹಕ್ಕು ಪತ್ರವನ್ನು ನಾಳೆ ಸಿಎಂ ಬಸವರಾಜ ಬೊಮ್ಮಯಿ ನೀಡಲಿದ್ದಾರೆ. ಆದರೆ, ಈ ಮನೆಗಳಿಗೆ ವಿದ್ಯುತ್, ಕುಡಿಯುವ ನೀರು, ಯುಜಿಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಇದರಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಿದ ಮೇಲೆ ಹಕ್ಕು ಪತ್ರ ನೀಡಿ ಎಂದು ಆಗ್ರಹಿಸಿದರು.
ಪೂರ್ಣಗೊಳ್ಳದ ಮನೆಗಳಿಗ ಹಕ್ಕುಪತ್ರ ನೀಡುವುದಕ್ಕೆ ಕೆ.ಎಸ್.ಈಶ್ವರಪ್ಪ ತರಾತುರಿ ಮಾಡುತ್ತಿರುವುದನ್ನು ನೋಡಿದರೆ ಮುಂದೆ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬಂತೆ ಭಾಸವಾಗುತ್ತಿದೆ. ಗೋವಿಂದ ಶೆಟ್ಟಿ ಕೊಪ್ಪದಲ್ಲಿ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ತರಾತುರಿಯಲ್ಲಿ ಮನೆಗಳ ಹಕ್ಕುಪತ್ರ ನೀಡಲು ಮುಂದಾಗಿದ್ದಾರೆ. ಇಲ್ಲಿಗೆ ವಿದ್ಯುತ್ ಒದಗಿಸಲು 9 ಕೋಟಿ ರೂ. ಮೆಸ್ಕಾಂಗೆ ಕಟ್ಟಬೇಕು, 4.50 ಕೋಟಿ ರೂ ಕಟ್ಟಿದರೆ ಟೆಂಡರ್ ಕರೆಯುತ್ತಾರೆ. ಈಗ 20 ಲಕ್ಷ ರೂ ಕಟ್ಟಿ ತಾತ್ಕಾಲಿಕ ವಿದ್ಯುತ್ ಪಡೆದಿದ್ದಾರೆ. ಮುಂದೆ ಶಾಶ್ವತ ಸಂಪರ್ಕ ಪಡೆಯದೆ ಹೋದ್ರೆ 28 ದಿನಕ್ಕೆ 7 ಲಕ್ಷ ರೂ. ನೀಡಬೇಕಾಗುತ್ತದೆ ಎಂದರು.