ಶಿವಮೊಗ್ಗ: ರಾಜ್ಯ ಸರ್ಕಾರದ 5ನೇ ಹಾಗೂ ಕೊನೆಯ ಗ್ಯಾರಂಟಿ ಯುವ ನಿಧಿಗೆ ನಾಳೆ ಸಿಎಂ ಸಿದ್ದರಾಮಯ್ಯ ಅವರು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ. ನಾಳೆ ಬೆಳಗ್ಗೆ ಸಿಎಂ ಸಿದ್ದರಾಮಯ್ಯ, ಆನ್ಲೈನ್ನಲ್ಲಿ ಇದುವರೆಗೂ ಯಾರು ಯುವ ನಿಧಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೋ ಅವರಿಗೆ ನೇರವಾಗಿ ಹಣ ಜಮಾ ಮಾಡಲಿದ್ದಾರೆ.
ಹೀಗಿದೆ ವೇದಿಕೆ ಸಿದ್ಧತೆ:ಪದವಿ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮಾ ಮುಗಿಸಿದವರಿಗೆ ಹಣ ಪಾವತಿ ಆಗಲಿದೆ. ನಾಳಿನ ಯುವ ನಿಧಿ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ನಲ್ಲಿ ವೇದಿಕೆ ಸಿದ್ದವಾಗಿದೆ. ಸುಮಾರು ನೂರು ಅಡಿ ಅಗಲದ ವೇದಿಕೆ ಸಿದ್ದಗೊಳಿಸಲಾಗಿದೆ. ವೇದಿಕೆಯ ಮುಂಭಾಗ ವಿಐಪಿಗಳಿಗೆ ಪ್ರತ್ಯೇಕ ಆಸನ ಸಿದ್ದವಾಗಿದೆ. ಸುಮಾರು 1 ಲಕ್ಷ ಖುರ್ಚಿ ಹಾಕಲಾಗಿದೆ. ಈ ಕಾರ್ಯಕ್ರಮಕ್ಕೆ ಸುಮಾರು 1.50 ಲಕ್ಷ ಜನ ಸೇರುವ ಸಾಧ್ಯತೆ ಇದೆ.
ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲೆ ಅಲ್ಲದೇ ದಾವಣಗೆರೆ, ಚಿಕ್ಕಮಗಳೂರು, ಶಿರಸಿ, ಕಾರವಾರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಆಗಮಿಸಲಿದ್ದಾರೆ. ಇದಕ್ಕಾಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಿಎಂ ಹಾಗೂ ಡಿಸಿಎಂ ವಿಮಾನ ನಿಲ್ದಾಣದಿಂದ ನೇರವಾಗಿ ಫ್ರೀಡಂ ಪಾರ್ಕ್ ವೇದಿಕೆಗೆ ಆಗಮಿಸಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ವಿಮಾನ ನಿಲ್ದಾಣಕ್ಕೆ ತೆರಳಿ, ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಿಎಂ, ಡಿಸಿಎಂ ಜೊತೆಗೆ ಕೌಶಲ್ಯಾಭಿವೃದ್ದಿ ಖಾತೆ ಸಚಿವ ಶರಣ ಪ್ರಕಾಶ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾಥ್ ನೀಡಲಿದ್ದಾರೆ.
ಯೋಜನೆ ಫಲಾನುಭವಿಗಳು ಯಾರು?:ಯುವನಿಧಿ ಯೋಜನೆಗೆ ಅಭ್ಯರ್ಥಿಗಳು ಸೇವಾ ಸಿಂಧು ಜಾಲತಾಣ https://sevasindhugs.karnataka.gov.in/ ನಲ್ಲಿ ಅರ್ಜಿ ಸಲ್ಲಿಸಬೇಕು. ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಪದವಿ, ಡಿಪ್ಲೋಮಾಗಳನ್ನು 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡಿರಬೇಕು ಹಾಗೂ 2023ರಲ್ಲಿ ತೇರ್ಗಡೆಯಾಗಿದ್ದು, 180 ದಿವಸಗಳವರೆಗೆ ನಿರುದ್ಯೋಗಿಗಳಾಗಿ ಅಭ್ಯರ್ಥಿಗಳು ಕನಿಷ್ಠ 6 ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕು. ಅಂತವರು ಈ ಯೋಜನೆ ಫಲಾನುಭವಿಗಳಾಗುತ್ತಾರೆ.
ಯೋಜನೆಗೆ ಅನರ್ಹರು ಯಾರು? : ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವವರು, ಸ್ವ-ಉದ್ಯೋಗಿಗಳು, ಕನಿಷ್ಠ 6 ವರ್ಷ ಕರ್ನಾಟಕ ನಿವಾಸಿಗಳಲ್ಲದವರು ಮತ್ತು ಪದವಿ ಅಥವಾ ಡಿಪ್ಲೋಮಾ ಕೋರ್ಸ್ ಕರ್ನಾಟಕ ಹೊರತಾಗಿ ಬೇರೆ ರಾಜ್ಯದಲ್ಲಿ ವ್ಯಾಸಂಗ ಮಾಡಿದವರು, ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಯೋಜನೆಗೆ ಅನರ್ಹರಾಗಿರುತ್ತಾರೆ.
2023ರಲ್ಲಿ ಪದವಿ ಅಥವಾ ಡಿಪ್ಲೋಮಾ ತೇರ್ಗಡೆಯಾದ ನಂತರ ಕನಿಷ್ಠ 6 ತಿಂಗಳವರೆಗೆ ಉದ್ಯೋಗವನ್ನು ಪಡೆಯದ ಮತ್ತು ಕರ್ನಾಟಕದಲ್ಲಿ ವಾಸವಿದ್ದು, ವಿದ್ಯಾರ್ಥಿಯಾಗಿರುವ ಕನ್ನಡಿಗರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ವಾಸವಿರುವ ವಿದ್ಯಾರ್ಥಿ ಎಂದರೆ, ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳವರೆಗೆ ಪದವಿ ಅಥವಾ ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದವರು.
6 ವರ್ಷಗಳ ವಾಸವಿರುವುದನ್ನು ಎಸ್ಎಸ್ಎಲ್ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಅಥವಾ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ನೋಂದಣಿ ಸಂಖ್ಯೆ ಮತ್ತು ಪದವಿ ಪ್ರಮಾಣಪತ್ರ ಅಥವಾ ಪಡಿತರ ಚೀಟಿ ನೀಡಿದ ದಿನಾಂಕ ಮತ್ತು ಪದವಿ ಪ್ರಮಾಣ ಪತ್ರ NIOS(ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್‌ಸ್ಕೂಲಿಂಗ್) ನೀಡಿದ ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ಸಹ ವಾಸಸ್ಥಳ ಪರಿಶೀಲನೆಗಾಗಿ ಪರಿಗಣಿಸಲಾಗುವುದು.
ಅಭ್ಯರ್ಥಿಯ ಪದವಿ ಅಥವಾ ಡಿಪ್ಲೋಮಾ ಹೊಂದಿರುವ ಸ್ಥಿತಿಯ ಬಗ್ಗೆ ಪರಿಶೀಲಿಸಲು National Academic Depository (NAD)ಯಲ್ಲಿ ಅಪ್ಲೋಡ್ ಮಾಡಲಾದ ಅಭ್ಯರ್ಥಿಗಳ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪದವಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದು.