ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡರ ಪ್ರಥಮ ಪುಣ್ಯ ಸ್ಮರಣಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅವರು ಜೆಡಿಎಸ್ ಸೇರಿ ದೇವೇಗೌಡರ ಕೈ ಬಲಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಭದ್ರಾವತಿಯ ಗೋಣಿಬೀಡಿನ ಅಪ್ಪಾಜಿಗೌಡರ ತೋಟದಲ್ಲಿ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ದಿವಂಗತ ಅಪ್ಪಾಜಿ ಗೌಡರ ಪುತ್ಥಳಿಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಲೋಕಾರ್ಪಣೆ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ದೇವೇಗೌಡರನ್ನು ಹಾಗೂ ಕುಮಾರಸ್ವಾಮಿ ಅವರನ್ನು ಹಾಡಿ ಹೊಗಳಿದರು. ಕರ್ನಾಟಕದಲ್ಲಿ ದೇವೆಗೌಡರ ಕೈ ಬಲಪಡಿಸಬೇಕಿದೆ. ದೇವೆಗೌಡರ ಕೊನೆಗಾಲದಲ್ಲಿ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದ್ದೇನೆ ಎಂದರು.
ಕರ್ನಾಟಕದಲ್ಲಿ ಇವತ್ತಿನಿಂದ ಶುಭ ಕಾಲ ಆರಂಭವಾಗಿದೆ. ಮುಂದೆ ರಾಜ್ಯದಲ್ಲಿ ಉತ್ತಮವಾದ ಕಾಲ ಕಾಣುತ್ತೇವೆ. ದೇವೇಗೌಡರು 11 ತಿಂಗಳು ಪ್ರಧಾನಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ದೇವೇಗೌಡರು ಅಪ್ಪಿತಪ್ಪಿ ಒಕ್ಕಲಿಗರ ಜಾತಿಯಲ್ಲಿ ಹುಟ್ಟಿದರು. ಅವರು ಬೇರೆ ಜಾತಿಯಲ್ಲಿ ಹುಟ್ಟಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಜನರು ಅವರ ಪ್ರತಿಮೆ ಅನಾವರಣ ಮಾಡುತ್ತಿದ್ದರು ಎಂದು ತಿಳಿಸಿದರು.
ಪಂಜಾಬ್ನಲ್ಲಿ ಗೋಧಿಯ ಒಂದು ತಳಿಗೆ ದೇವೇಗೌಡ ಎಂದು ಹೆಸರಿಡಲಾಗಿದೆ. ಯಡಿಯೂರಪ್ಪ ಫೇಲಾದ್ರೆ, ಕುಮಾರಸ್ವಾಮಿ ಆಹಾ ರುದ್ರ, ಆಹಾ ದೇವ ಅಂತಾ ಖಡ್ಗ ಹಿಡಿದುಕೊಂಡು ಹೊರಡಬೇಕಾಗುತ್ತದೆ. ಅಂತಹ ಕೆಲಸವನ್ನು ನಾವು ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಕೈ ಬಲಪಡಿಸುತ್ತೇವೆ ಎಂದರು.
ನಾನು 1994 ರಲ್ಲಿ ದೇವೇಗೌಡರು ಸಿಎಂ ಆಗುತ್ತಾರೆ ಎಂದು ಹೇಳಿದ್ದೆ. ಅದೇ ತರ ಸಿಎಂ ಆದ್ರು. ನಾನು ಇಂದು ಹೇಳುತ್ತಿದ್ದೇನೆ. ಮತ್ತೆ ದಳ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.
ಅಪ್ಪಾಜಿ ಗೌಡರ ಪುಣ್ಯಸ್ಮರಣೆ ವೇಳೆ ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿದ ಸಿಎಂ ಇಬ್ರಾಹಿಂ ನಂತರ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ ಅವರು, ಭದ್ರಾವತಿಯ ಅಪ್ಪಾಜಿ ಗೌಡರು ಹಣ ಮಾಡದೆ ಜನ ಗಳಿಸಿದ್ದಾರೆ. ಇದಕ್ಕೆ ಇಂದು ಜನ ಸೇರಿರುವುದೇ ಸಾಕ್ಷಿಯಾಗಿದೆ. ಭದ್ರಾವತಿಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರು ಇಡಬೇಕು. ಇಲ್ಲವಾದಲ್ಲಿ ನಮ್ಮ ಸರ್ಕಾರ ಬಂದಾಗ ಇಡಲಾಗುವುದು ಎಂದರು.
ನಮ್ಮ ಕುಟುಂಬದ ಹಿರಿಯ ಅಣ್ಣ ಇಬ್ರಾಹಿಂ ನಮ್ಮಿಂದ ಕೆಲ ದಿನ ದೂರುವಾಗಿದ್ರೂ ಸಹ ದೇವೇಗೌಡರ ಬಗ್ಗೆ ಎಂದೂ ಹಗುರವಾದ ಮಾತನಾಡಿಲ್ಲ. ಇಬ್ರಾಹಿಂ ಅವರ ಮಾತು ಸತ್ಯ ಇದೆ. 1994 ರಲ್ಲಿ ಸರ್ಕಾರ ಬರುತ್ತದೆ ಎಂದು ಹೇಳಿದ್ರು. ಮತ್ತೆ ಕರ್ನಾಟಕ ರಾಜಕಾರಣದಲ್ಲಿ ಕನ್ನಡಿಗರ, ರೈತರ ಮಹಿಳೆಯರಿಗೆ, ಮಕ್ಕಳಿಗೆ ರಕ್ಷಣೆಗೆ ನೀಡುವ ಸರ್ಕಾರ ತರುವಂತಹ ಸಂದೇಶ ನೀಡಿದ್ದಾರೆ.
ಜನತಾದಳವನ್ನು ಯಾರು ಮುಳುಗಿಸಲು ಸಾಧ್ಯವಿಲ್ಲ. ನಿಮ್ಮಂಥವರಿಂದ ಹಾಗೂ ಲಕ್ಷಾಂತರ ಜನರಿಂದ ಉಳಿಯುತ್ತೆ. 2023 ರಲ್ಲಿ ನಿಜವಾದ ಜನತಾ ಸರ್ಕಾರ ಬರುತ್ತದೆ. ಸಹೋದರಿಯನ್ನು ನಿಮ್ಮ ಮಡಿಲಿಗೆ ಹಾಕುತ್ತೇವೆ ಎಂದು ಭದ್ರಾವತಿಯ ಮುಂದಿನ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಗೌಡರ ಹೆಸರನ್ನು ವೇದಿಕೆಯಲ್ಲಿ ಘೋಷಿಸಿದರು.
ಶಾರದ ಅಪ್ಪಾಜಿಗೌಡ ಮಾತನಾಡಿ, ಅಕ್ಟೋಬರ್ 2 ರಂದು ಗಾಂಧಿ ಪ್ರತಿಮೆಗೆ ಹಾರ ಹಾಕುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡುತ್ತೇನೆ. ಭದ್ರಾವತಿ ಜನತೆ ಹೆದರುವ ಅವಶ್ಯಕತೆ ಇಲ್ಲ. ವೇದಿಕೆಯಲ್ಲಿ ಆದಿಚುಂಚನಗಿರಿ ಪೀಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬಸವ ಮರಳಸಿದ್ದ ಸ್ವಾಮೀಜಿ ಸೇರಿ ಅನೇಕರು ಹಾಜರಿದ್ದರು.
ಇದನ್ನೂ ಓದಿ:ವಿಪಕ್ಷ ಕುಮಾರವ್ಯಾಸ v/s ಆಡಳಿತ ಕುಮಾರವ್ಯಾಸ.. ಸಿದ್ದರಾಮಯ್ಯ ಹಳೆಗನ್ನಡ ಮೇಷ್ಟ್ರು, ಸಿಎಂ ಬೊಮ್ಮಾಯಿನೂ ಸೂಪರು..