ಶಿವಮೊಗ್ಗ:ಕನ್ನಡದ ವಚನಗಾರ್ತಿ, ಶಿವಶರಣೆ ಅಕ್ಕಮಹಾದೇವಿ ಅವರ 65 ಅಡಿ ಎತ್ತರದ ಪುತ್ಥಳಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅನಾವರಣಗೊಳಿಸಿದರು. ಅಕ್ಕಮಹಾದೇವಿ ಅವರ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಅಕ್ಕಮಹಾದೇವಿ ಥೀಮ್‌ಪಾರ್ಕ್ ಅನ್ನು ಗುಜರಾತ್ನ ಅಕ್ಷರ ಧಾಮದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಮೊದಲ ಭಾಗವಾಗಿ ಇಂದು ಸಿಎಂ ಬೊಮ್ಮಾಯಿ ದೀಪ ಬೆಳಗಿಸುವ ಮೂಲಕ ಪುತ್ಥಳಿ ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೈರತಿ, ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಗ್ರಾಣ ನಿಗಮದ ಅಧ್ಯಕ್ಷ ಹೆಚ್.ಟಿ.ಬಳಿಗಾರ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ಭಾಗಿಯಾಗಿದ್ದರು.
ಪೂರ್ಣವಾಗದ ಥೀಮ್ ಪಾರ್ಕ್:ಅಕ್ಷರ ಧಾಮದ ಮಾದರಿಯಲ್ಲಿ ಅಕ್ಕಮಹಾದೇವಿ ಜನ್ಮ ಸ್ಥಳವನ್ನು ಅಭಿವೃದ್ದಿ ಮಾಡಲಾಗುತ್ತಿದೆ. ಥೀಮ್ ಪಾರ್ಕ್ ಕಾಮಗಾರಿ ಇನ್ನೂ ನಡೆಯುತ್ತಿದೆ. ಆದರೆ ಅಕ್ಕಮಹಾದೇವಿ ರವರ 65 ಅಡಿ ಎತ್ತರದ ಪುತ್ಥಳಿಯನ್ನು ಮಾತ್ರ ಇಂದು ಉದ್ಘಾಟನೆ ಮಾಡಲಾಗಿದೆ. ಕಾಮಗಾರಿ ಮುಗಿಯಲು ಇನ್ಜೂ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ: ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 14 ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆಯನ್ನು ರಾಜ್ಯದ ಸಚಿವರು ಹಾಗೂ ವಕ್ಕಲಿಗ ಸಮುದಾಯದ ಸ್ವಾಮೀಜಿಗಳು ಇತ್ತೀಚೆಗೆ ಅನಾವರಣಗೊಳಿಸಿದರು. ಕೆಂಪೇಗೌಡ ಪುತ್ಥಳಿ ಅನಾವರಣ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದಿದ್ದು ದಾರಿಯುದ್ದಕ್ಕೂ ಸಮುದಾಯದ ಮುಖಂಡರು ಕೆಂಪೇಗೌಡರಿಗೆ ಜಯಕಾರ ಕೂಗಿ ಕುಣಿದು ಕುಪ್ಪಳಿಸಿದ್ದಾರೆ.