ಶಿವಮೊಗ್ಗ:ಪೌರತ್ವ ಕಾಯಿದೆಯಿಂದ ದೇಶದ ಅಲ್ಪ ಸಂಖ್ಯಾತರಿಗೆ ಯಾವ ರೀತಿಯಲ್ಲೂ ಅನ್ಯಾಯವಾಗಲ್ಲ, ಸಿಎಎ ಕಾಯಿದೆ ಬಗ್ಗೆ ಯಾವ ಅಲ್ಪ ಸಂಖ್ಯಾತರು ಹೆದರುವ ಅವಶ್ಯಕತೆ ಇಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಪೌರತ್ವ ಕಾಯಿದೆಯಿಂದ ದೇಶದ ಅಲ್ಪ ಸಂಖ್ಯಾತರಿಗೆ ಅನ್ಯಾಯವಾಗಲ್ಲ: ಬಿ.ವೈ.ರಾಘವೇಂದ್ರ
ಪೌರತ್ವ ಕಾಯಿದೆಯಿಂದ ದೇಶದ ಅಲ್ಪ ಸಂಖ್ಯಾತರಿಗೆ ಯಾವ ರೀತಿಯಲ್ಲೂ ಅನ್ಯಾಯವಾಗಲ್ಲ, ಇದನ್ನು ಕಾಂಗ್ರೆಸ್ನವರು ಸುಳ್ಳು ಹೇಳಿ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ಪೌರತ್ವ ಕಾಯಿದೆ ಕುರಿತು ಶಿವಮೊಗ್ಗ ವಿಭಾಗ ಮಟ್ಟದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕಾರ್ಯಕರ್ತರಿಗೆ ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಿದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಿಎಎ ಕಾಯಿದೆಯನ್ನು ಇದೇ ಮೊದಲ ಬಾರಿಗೆ ಜಾರಿಗೆ ತರುತ್ತಿಲ್ಲ. ಹಿಂದೆ ಇದ್ದ ಕಾನೂನಿನಲ್ಲಿ ಕೆಲ ತಿದ್ದುಪಡಿ ಮಾಡಿ ಜಾರಿಗೆ ತರಲಾಗಿದೆ. ಸಿಎಎ ಲೋಕಸಭೆಯಲ್ಲಿ ಮಸೂದೆ ಜಾರಿಯಾಗಿ, ರಾಜ್ಯಸಭೆಗೆ ಹೋದಾಗ ಅಲ್ಲಿ ಬಿಜೆಪಿಗೆ ಬಹುಮತ ಇಲ್ಲದೇ ಹೋದರೂ ಬೇರೆ ಬೇರೆ ಪಕ್ಷದವರು ಬೆಂಬಲ ಸೂಚಿಸಿದರು. ಇದರ ಪರಿಣಾಮ ಸಿಎಎ ಕಾನೂನು ಜಾರಿಯಾಯಿತು ಎಂದರು.
ಅಖಂಡ ಭಾರತದಲ್ಲಿ ಇರುವ ಅಲ್ಪ ಸಂಖ್ಯಾತರಾದ ಹಿಂದೂ, ಜೈನ್, ಪಾರ್ಸಿ, ಸಿಖ್ ನವರಿಗೆ ಭಾರತದ ಪೌರತ್ವ ಸಿಗುತ್ತದೆ. ಇದು ಈ ಹಿಂದೆ ಆದ ಒಪ್ಪಂದವನ್ನು ಮಾಡಲಾಗುತ್ತಿದೆ ಅಷ್ಟೆ, ಇದನ್ನು ಕಾಂಗ್ರೆಸ್ನವರು ಸುಳ್ಳು ಹೇಳಿ ಅಲ್ಪ ಸಂಖ್ಯಾತರನ್ನು ದಾರಿ ತಪ್ಪಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಇರುವ ಯಾವ ಅಲ್ಪ ಸಂಖ್ಯಾತರಿಗೂ ಸಹ ಈ ಕಾನೂನಿನಿಂದ ಸಮಸ್ಯೆ ಆಗಲ್ಲ, ಅವರನ್ನು ದೇಶದಿಂದ ಕಳುಹಿಸುವ ಪ್ರಶ್ನೆಯೇ ಇಲ್ಲ ಎಂದರು. ಕಾಂಗ್ರೆಸ್ ನವರ ಸುಳ್ಳಿನ ಕುರಿತು ಬಿಜೆಪಿಯ ಕಾರ್ಯಕರ್ತರು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.