ಶಿವಮೊಗ್ಗ: ಪ್ರತಿಷ್ಠಿತ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ ಎಂದು ಆರೋಪಿಸಿ ಸಿಟಿಜನ್ ಯುನೈಟೆಡ್ ಮೂಮೆಂಟ್ ಪ್ರತಿಭಟನೆ ನಡೆಸಿದೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಮೂಮೆಂಟ್ ಕಾರ್ಯಕರ್ತರು, ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುವಂತೆ ಆಗಬೇಕಿದೆ ಎಂದು ಡಿಸಿ ಮೂಲಕ ಮನವಿ ಸಲ್ಲಿಸಿದರು.
ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಕೋವಿಡ್ ಸೋಂಕಿತರು ಕೊರೊನಾದಿಂದ ಸಾವನ್ನಪ್ಪದೆ, ಮೆಗ್ಗಾನ್ ಆಸ್ಪತ್ರೆಯ ಹೆಸರು ಕೇಳಿಯೇ ಸಾವನ್ನಪ್ಪುತ್ತಿದ್ದಾರೆ. ಮುಖ್ಯವಾಗಿ ಇಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸಾ ವ್ಯವಸ್ಥೆ ಇಲ್ಲ. ಸೋಂಕಿತರಿಗೆ ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ ಹಾಗೂ ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲ. ಇದರಿಂದ ಸೋಂಕಿತರು ಇಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಇದರಿಂದ ತಕ್ಷಣ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಲಾಯಿತು.
ನಿನ್ನೆ ನಗರದ ಕೆ.ಆರ್.ಪುರಂ ಬಡಾವಣೆಯ ನಿವಾಸಿಯೊಬ್ಬರು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ. ಇಲ್ಲಿ ವೈದ್ಯರು ಸೋಂಕಿತರ ಬಳಿ ಹೋಗುವುದಿಲ್ಲ. ಬದಲಾಗಿ ಸ್ಟಾಫ್ ನರ್ಸ್ ಹಾಗೂ ಎಂಬಿಬಿಎಸ್ ವಿದ್ಯಾರ್ಥಿಗಳನ್ನು ಕಳುಹಿಸುತ್ತಾರೆ ಎಂದು ಆರೋಪಿಸಿದರು. ಇದರಿಂದ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಮೂಮೆಂಟ್ ಜಿಲ್ಲಾಧ್ಯಕ್ಷ ಮುಜಾಹೀದ್ ಸಿದ್ದಿಕಿ ಆಕ್ರೋಶ ವ್ಯಕ್ತಪಡಿಸಿದರು.