ಶಿವಮೊಗ್ಗ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಕಾರ್ಯ ಮುಂದುವರಿದಿದೆ. ನಿನ್ನೆ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಜೆ ಎಸ್ ಚಿದಾನಂದಗೌಡ ಅವರು ಎತ್ತಿನಗಾಡಿಯ ಮೇಲೆ ಆಗಮಿಸಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಪ್ರವೀಣ್ ಜೈನ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಲೂನುಗಳಿಂದ ಅಲಂಕರಿಸಿದ ಎತ್ತುಗಳು, ಬಾಳೆಗಿಡ, ಹೂಗಳಿಂದ ಸಿಂಗರಿಸಿದ ಎತ್ತಿನಗಾಡಿಯಲ್ಲಿ ಬಂದ ಚಿದಾನಂದಗೌಡರು ಪಟ್ಟಣದ ತಾಲೂಕು ಕಚೇರಿಯ ಚುನಾವಣಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ತಮ್ಮ ಬೆಂಬಲಿಗರು ಮತ್ತು ಆಪ್ತರೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿವರೆಗೆ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿದರು.
ನಾಮಪತ್ರ ಸಲ್ಲಿಸಿ ಬಳಿಕ ಮಾತನಾಡಿದ ಜೆ ಎಸ್ ಚಿದಾನಂದಗೌಡರು, " ಜನ ಸೇವೆ ಮಾಡಲು ನಾನು ಬದ್ಧನಾಗಿದ್ದೇನೆ. ಅನ್ನದಾತರ ವಾಹನ ಎತ್ತಿನ ಗಾಡಿ ಮೂಲಕ ಬಂದು ನಾಮಪತ್ರ ಸಲ್ಲಿಸಿದ್ದೇನೆ. ಜನತೆ ಎಲ್ಲಾ ರಾಷ್ಟ್ರೀಯ ಪಕ್ಷಗಳ ಆಡಳಿತ ವೈಖರಿಯಿಂದ ಬೇಸತ್ತು ಹೋಗಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರ ಅಭ್ಯರ್ಥಿಯಾದ ನನ್ನನ್ನು ಸ್ಥಳೀಯನಾಗಿರುವ ಕಾರಣಕ್ಕೆ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವಿದೆ. ಮತದಾರರು ನಮ್ಮ ಜನಪರ ಹೋರಾಟಗಳನ್ನು ಗಮನಿಸಿದ್ದಾರೆ. ನನ್ನನ್ನು ಕ್ಷೇತ್ರದ ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದ್ರೆ, ರಾಜ್ಯ ರಾಜಧಾನಿಯಲ್ಲಿ ವಾಸ ಮಾಡದೇ ಸೊರಬದಲ್ಲಿಯೇ ಇರುತ್ತೇನೆ. ಜೊತೆಗೆ, ರೈತರ ಪರವಾಗಿ ಧ್ವನಿ ಎತ್ತುವ ಮೂಲಕ ಅವರ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಪ್ರತಿ ಹೋಬಳಿ ಮಟ್ಟದಲ್ಲಿ ರೈತ ವೃತ್ತ ಸ್ಥಾಪನೆ ಮತ್ತು ರೈತ ದಿನಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು " ಎಂದು ಭರವಸೆಗಳನ್ನು ನೀಡಿದರು.