ಶಿವಮೊಗ್ಗ : ಬಿಜೆಪಿ ಪಕ್ಷಕ್ಕೆ ಅಷ್ಟು ತಾಕತ್ತಿದ್ದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ತೋರಿಸಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದ್ರೇಶ್ ಕಮಲ ನಾಯಕರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದ್ರೇಶ್ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪನವರು ಕಾಂಗ್ರೆಸ್ನಲ್ಲಿ ನಾಯಕತ್ವ ಇಲ್ಲ, ಕಾಂಗ್ರೆಸ್ ಮುಳುಗುವ ಹಡಗು ಎಂದು ಹೇಳಿಕೆ ನೀಡಿದ್ದಾರೆ. ಕೆಜೆಪಿ ಬಿಟ್ಟು ಬಿಜೆಪಿಗೆ ಯಡಿಯೂರಪ್ಪನವರು ಬರದೇ ಹೋಗಿದ್ದರೆ ಬಿಜೆಪಿಯಲ್ಲಿ ನಾಯಕತ್ವ ಇತ್ತೇ? ಎಂದು ಪ್ರಶ್ನಿಸಿದರು. ಈಗಲೂ ಬಿಜೆಪಿ ನಾಯಕರಿಗೆ ತಾಕತ್ತು ಅನ್ನುವುದಿದ್ದರೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನೋಡಲಿ, ಆಮೇಲೆ ಆ ಪಕ್ಷ ಎಷ್ಟು ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂಬುದನ್ನು ನೀವೇ ನೋಡಿಕೊಳ್ಳಿ. 35 ಸೀಟನ್ನು ಗೆಲ್ಲುವುದು ಕೂಡಾ ಕಷ್ಟವೇ ಎಂದು ತೀರುಗೇಟು ನೀಡಿದರು.
70 ವರ್ಷಗಳಿಂದ ಆಡಳಿತ ಮಾಡಿಕೊಂಡು ಬಂದ ಪಕ್ಷಕ್ಕೆ ನಾಯಕತ್ವ ಇಲ್ಲ ಎನ್ನುವ ಬಾಲಿಶ ಹೇಳಿಕೆಗಳನ್ನು ಕೊಡುವುದೇ ಇವರ ಕೆಲಸವಾಗಿದೆ. ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಡೀ ಸಿಟಿ ಗುಂಡಿ ಬಿದ್ದು ಹಾಳಾಗಿ ಹೋಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ. ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಇಡೀ ನಗರವನ್ನು ಹಾಳು ಮಾಡಿರುವುದೇ ಈಶ್ವರಪ್ಪನವರ ಕೂಡುಗೆಯಾಗಿದೆ ಎಂದು ಟೀಕಿಸಿದರು.
ಸಚಿವರು ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡದೇ ಸಿದ್ದರಾಮಯ್ಯನವರ ಹಾಗೂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಕಳೆದ ವರ್ಷ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ಈ ಸರ್ಕಾರ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಇನ್ನು ಗ್ರಾಮ ಪಂಚಾಯತಿಗಳ ಚುನಾವಣೆಗೆ ಹೊರಡಿಸಿರುವ ಮೀಸಲಾತಿಯಲ್ಲಿ ಬಿಜೆಪಿಯ ಹಸ್ತಕ್ಷೇಪ ಇದೆ ಎಂದು ಆರೋಪಿಸಿದ ಸುಂದ್ರೇಶ್, ಇದರಿಂದ ಹಿಂದೂಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ. ಹಾಗಾಗಿ, ಈಗ ಹೊರಡಿಸಿರುವ ಮೀಸಲಾತಿಯನ್ನು ರದ್ದುಪಡಿಸಿ ಮರು ಮೀಸಲಾತಿ ತರಬೇಕೆಂದು ಒತ್ತಾಯಿಸಿದರು.