ಶಿವಮೊಗ್ಗ:ಮುಂಗಾರು ಮಳೆ ಆರಂಭವಾಗುವ ಮೊದಲೇ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲಾ ಕೆರೆ-ಕಟ್ಟೆ, ಗೋಕಟ್ಟೆ, ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿ ಮಳೆ ನೀರು ಗರಿಷ್ಠ ಸಂಗ್ರಹವಾಗಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಲಶಕ್ತಿ ಅಭಿಯಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಜಿಪಂ ಸಿಇಒ, ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆಯಡಿ ಕೈಗೊಳ್ಳಬಹುದಾದ ಸಾಂಪ್ರದಾಯಿಕ ನೀರಿನ ಸಂಗ್ರಹಣಾ ವ್ಯವಸ್ಥೆಗಳ ಬಗ್ಗೆ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವರದಿ ನೀಡಿದೆ. ಇದರಂತೆ 60 ಕಲ್ಯಾಣಿ, 230 ಕೆರೆ, 212 ಗೋಕಟ್ಟೆ, 337 ಕಟ್ಟೆ ಸೇರಿದಂತೆ ಒಟ್ಟು 839 ಸಾಂಪ್ರದಾಯಿಕ ನೀರಿನ ಸಂಗ್ರಹಣಾ ವ್ಯವಸ್ಥೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಯೋಜನೆಯಡಿ ಬದು ನಿರ್ಮಾಣ, ಕಲ್ಯಾಣಿ ಪುನಶ್ಚೇತನ, ನಾಲಾ ಪುನಶ್ಚೇತನ, ಗೋಕಟ್ಟೆ ನಿರ್ಮಾಣ, ಮಲ್ಟಿ ಆರ್ಚ್ ಚೆಕ್ ಡ್ಯಾಂ, ಚೆಕ್ ಡ್ಯಾಂ ಹೂಳು ತೆಗೆಯುವ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಸೂಚಿಸಿದರು.