ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನ್ನಡ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಅನುದಾನ ಕಡಿತಗೊಳಿಸದೆ ಕನ್ನಡ ವಿವಿಗೆ ಮಾತ್ರ ಅನುದಾನ ಕಡಿತಗೊಳಿಸುವ ಮೂಲಕ ಕನ್ನಡ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸಿದೆ. ಇದಕ್ಕೆ ನನ್ನ ವಿರೋಧವಿದೆ. ಆದರೆ ನಾನು ಸಂಸ್ಕೃತ ವಿರೋಧಿಯಲ್ಲ ಎಂದರು.
ಕನ್ನಡ ಭಾಷೆ, ಸಾಹಿತ್ಯ, ಪರಂಪರೆ ಕುರಿತು ಅಧ್ಯಯನ ನಡೆಸಲು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆ ಉದ್ದೇಶವಾಗಿದೆ. ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅನುದಾನ ಬಿಡುಗಡೆಗೊಳಿಸಲು ಹಣ ಇಲ್ಲವೆಂದು ಹೇಳಿ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಹಣ ಬಿಡುಗಡೆ ಮಾಡುತ್ತಿದೆ. ಇದು ಹೇಗೆ ಎಂದು ಪ್ರಶ್ನಿಸಿದರು.
ಓದಿ:ಸೆಸ್ ದರ ಇಳಿಸಿ ಎಪಿಎಂಸಿ ಉಳಿಸಿ: ಕಾಂಗ್ರೆಸ್ ಆಗ್ರಹ
ಹಣ ಬಿಡುಗಡೆಯಾಗದ ಕಾರಣ ಹಂಪಿ ಕನ್ನಡ ವಿವಿಯ ಸಂಶೋಧನಾ ಚಟುವಟಿಕೆಗಳು ಸ್ಥಗಿತಗೊಂಡಿವೆ. ರಾಜ್ಯ ಸರ್ಕಾರದ ಈ ಕನ್ನಡ ವಿರೋಧಿ ಧೋರಣೆಯಿಂದಾಗಿ ಕನ್ನಡದ ಸ್ಥಾನಮಾನಕ್ಕೆ ಧಕ್ಕೆ ಉಂಟಾಗುತ್ತಿದೆ. 1980ರಲ್ಲಿ ನಡೆದ ಗೋಕಾಕ್ ಚಳುವಳಿಯಂತೆ ಇಂದು ಕನ್ನಡದ ಉಳಿವಿಗಾಗಿ ಜನಾಂದೋಲನ ಅನಿವಾರ್ಯವಿದೆ ಎಂದರು.
ಇದರ ಜೊತೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಯುತ್ತಿರುವ ಯುವಜನೋತ್ಸವ ಸ್ಪರ್ಧೆಯಲ್ಲಿ ಕನ್ನಡ ವಿರೋಧಿ ನಿಲುವು ತೆಗೆದುಕೊಳ್ಳಲಾಗಿದೆ. ಬೆಂಗಳೂರು ನಗರ ಜಿಲ್ಲಾಮಟ್ಟದ ಯುವಜನೋತ್ಸವ ಆಯ್ಕೆಯಲ್ಲಿ ಆಶುಭಾಷಣ ಸ್ಪರ್ಧೆಯನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾಡಬೇಕು ಹಾಗೂ ಏಕಾಂತ ನಾಟಕ, ಸಾಮಾಜಿಕ ಕಳಕಳಿಯ ಬೀದಿ ನಾಟಕಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾಡಬೇಕು ಎಂದು ನಿಯಮ ರೂಪಿಸಲಾಗಿದೆ. ಯುವಜನೋತ್ಸವ ನಡೆಯುತ್ತಿರುವುದು ಕರ್ನಾಟಕದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ. ಆದರೆ ಇಲ್ಲೇ ಕನ್ನಡವನ್ನು ಕಡೆಗಣಿಸುವ ಮೂಲಕ ಕೇಂದ್ರ ಸರ್ಕಾರ ತ್ರಿಭಾಷ ಸೂತ್ರವನ್ನು ಹೇರುತ್ತಿದೆ. ಗ್ರಾಮೀಣ ಭಾಗದ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಯುವಜನೋತ್ಸವ ಸ್ಪರ್ಧೆಯಲ್ಲಿ ಕಡೆಗಣಿಸಲಾಗುತ್ತಿದೆ ಎಂದರು.