ಶಿವಮೊಗ್ಗ:ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನವಾಗಿರುವ 10 ಮಂದಿ ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಈ ಮೂಲಕ ನಕ್ಸಲ್ ಚಟುವಟಿಕೆಗಳು ಹೊರತುಪಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿ ಯುಎಪಿಎ ಕಾಯ್ದೆಯಡಿ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಯುಎಪಿಎ ಅಡಿ ಪ್ರಕರಣ ದಾಖಲಾಗಿರುವುದರಿಂದ ಹರ್ಷ ಹತ್ಯೆ ಆರೋಪಿಗಳಿಗೆ ಜೈಲೇ ಗತಿ ಎನ್ನುವಂತಾಗಿದೆ.
ಹರ್ಷ ಹತ್ಯೆ ಪ್ರಕರಣದಲ್ಲಿ 10 ಮಂದಿ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇವರ ವಿರುದ್ಧ ಐಪಿಸಿ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ನಂತರ ಹೆಚ್ಚಿನ ತನಿಖೆಗಾಗಿ 11 ದಿನ ಆರೋಪಿಗಳನ್ನು ವಶಕ್ಕೆ ಪಡೆದಿದ್ದ ಸಿಬ್ಬಂದಿ, ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆಯನ್ನೂ ಅಳವಡಿಸಿಕೊಂಡಿದ್ದಾರೆ.
ಯಾವುದೇ ಒಂದು ವರ್ಗ, ಬಡಾವಣೆ, ಊರು ಅಥವಾ ಒಂದು ನಗರ ಹೀಗೆ ಒಂದು ಸಮಾಜ ಭಯಭೀತವಾಗುವಂಥಹ ಕೃತ್ಯ ನಡೆಸಿದವರ ಮೇಲೆ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಬಹುದಾಗಿದೆ. ಹೀಗಾಗಿ, ಹರ್ಷ ಹತ್ಯೆ ಆರೋಪಿಗಳ ವಿರುದ್ಧವೂ ಈ ಪ್ರಕರಣ ದಾಖಲಿಸಲಾಗಿತ್ತು.
11 ದಿನಗಳ ಕಾಲ ವಶ..ಸಿಆರ್ಪಿಸಿ ಅಡಿ ಯಾವುದೇ ಆರೋಪಿಯನ್ನು 15 ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆಯಲು ಸಾಧ್ಯವಿದೆ. ಆದರೆ, ಯುಎಪಿಎ ಅಡಿ ಪ್ರಕರಣ ದಾಖಲಾದರೆ ಬರೋಬ್ಬರಿ 30 ದಿನಗಳವರೆಗೆ ಆರೋಪಿಗಳನ್ನು ತನಿಖೆಗಾಗಿ ಪೊಲೀಸರು ವಶಕ್ಕೆ ಪಡೆಯಲು ಅವಕಾಶವಿದೆ. ಹರ್ಷ ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಈಗಾಗಲೇ ತನಿಖೆಗಾಗಿ 11 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.