ಶಿವಮೊಗ್ಗ:ಪ್ರಚೋದನಕಾರಿ ಹೇಳಿಕೆ ಆರೋಪ ಹಿನ್ನೆಲೆ ಬಿಜೆಪಿ ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಅವರ ವಿರುದ್ಧ ಕಾಂಗ್ರೆಸ್ ನೀಡಿದ ದೂರಿನ ಆಧಾರದ ಮೇಲೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊನ್ನೆ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ನೀಡಿರುವ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರ ವಿರುದ್ಧ ರಾಜಕೀಯ ವಿಶ್ಲೇಷಕ ತೆಹಸೀನ್ ಪೂನಾವಾಲಾ ಎಂಬುವರು ದೂರು ದಾಖಲಿಸಿಕೊಳ್ಳುವಂತೆ ಟ್ವಿಟರ್ನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೋಟೆ ಪೊಲೀಸರು ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿ ನೋಟಿಸ್ ನೀಡಿದ್ದರು. ಹಾಗಾಗಿ ಪೂನಾವಾಲಾ ಪರವಾಗಿ ಜಿಲ್ಲಾ ಕಾಂಗ್ರೆಸ್ನಿಂದ ಬಿಜೆಪಿ ಸಂಸದೆಯ ವಿರುದ್ಧ ದೂರು ನೀಡಲಾಗಿದೆ. ಈ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು 153A, 153B, 268, 295A, 298, 504, 508 ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಾದ್ವಿ ಪ್ರಜ್ಞಾ ಹೇಳಿದ್ದೇನು?: 'ಲವ್ ಜಿಹಾದ್ ಮಾಡುವವರಿಗೆ ಲವ್ ಜಿಹಾದ್ ಮೂಲಕವೇ ಉತ್ತರ ಕೊಡಿ. ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿಕೊಂಡು ಮನೆಯಲ್ಲಿ ಇಟ್ಟುಕೊಳ್ಳಿ. ಯಾವ ಸಮಯ ಬರುತ್ತದೋ ಗೊತ್ತಿಲ್ಲ. ಆತ್ಮರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ. ಹರ್ಷನಂತೆ ನಮ್ಮ ಮೇಲೂ ದಾಳಿ ನಡೆಯಬಹುದು. ಹೆಣ್ಣು ಮಕ್ಕಳನ್ನು ನಡೆದಾಡುವ ಬಾಂಬ್ಗಳಂತೆ ರೂಪಿಸಬೇಕು. ಹಿಂದು ಹೆಣ್ಣುಮಕ್ಕಳ ವಿಚಾರಕ್ಕೆ ಬಂದರೆ ತಿರುಗಿ ಬೀಳಬೇಕು. ಲವ್ಜಿಹಾದ್ ನಡೆಯದಂತೆ ತಡೆಯಬೇಕು. ಆತ್ಮರಕ್ಷಣೆಗಾಗಿ ಪರವಾನಗಿ ಸಹಿತ ಆಯುಧಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು' ಎಂದು ಹಿಂದು ಸಮಾಜಕ್ಕೆ ಕರೆ ನೀಡಿದ್ದರು.
ಓದಿ:ಸ್ವಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಖಂಡನೆ: ದೂರುದಾರನಿಗೆ ಠಾಣೆಗೆ ಬರುವಂತೆ ಸೂಚಿಸಿದ ಶಿವಮೊಗ್ಗ ಪೊಲೀಸ್