ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೊರಬ ಪಟ್ಟಣದ ಬಳಿ ನಡೆದಿದೆ.
ಜಿಲ್ಲೆಯ ಸೊರಬ ತಾಲೂಕಿನ ಹಳೇಸೊರಬ ಗ್ರಾಮದ ಕೆರೆ ಏರಿ ಸಮೀಪ ಈ ಘಟನೆ ನಡೆದಿದ್ದು, ಸಂತೋಷ್ ಎಂಬುವವರು ಮೃತಪಟ್ಟಿದ್ದಾರೆ. ಸಂತೋಷ್ ಮೂಲತಃ ಶಿರಸಿಯ ನಿವಾಸಿಯಾಗಿದ್ದು, ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯಾಗಿದ್ದರು. ಲಾಕ್ಡೌನ್ನಿಂದಾಗಿ ತಮ್ಮೂರಿಗೆ ಬಂದಿದ್ದರು. ಶಿರಸಿಯಿಂದ ತವನಂದಿ ಮಾರ್ಗವಾಗಿ ಸೊರಬಕ್ಕೆ ಆಗಮಿಸುವ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಕಾರು ಚಾಲಕ ರಾಘವ ಹಾಗೂ ಗಣಪತಿ ಎಂಬುವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿರಸಿಗೆ ರವಾನಿಸಲಾಗಿದೆ. ಸ್ಥಳಕ್ಕೆ ಸಿಪಿಐ ಆರ್.ಡಿ.ಮರಳು ಸಿದ್ದಪ್ಪ, ಪಿಎಸ್ಐ ಟಿ.ಬಿ.ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಘಾತದ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ವಲಯವೆಂದು ಘೋಷಣೆಗೆ ಆಗ್ರಹ: ಕಳೆದ ಮೂರು ವರ್ಷದಿಂದ ಇದೇ ಸ್ಥಳದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೆ ಕಳೆದ ವರ್ಷ ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದ. ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇತ್ತೀಚೆಗೆ ರಸ್ತೆ ದುರಸ್ತಿಗೊಳಿಸಿ ಅಭಿವೃದ್ಧಿಗೊಳಿಸಲಾಗಿದೆ. ಹಾಗಾಗಿ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆಯಲ್ಲಿ ಸಾಧ್ಯವಾದರೆ ಹಂಪ್ಸ್ ನಿರ್ಮಿಸಬೇಕು ಹಾಗೂ ಅಪಘಾತ ವಲಯ ಎಂಬ ಎಚ್ಚರಿಕೆಯ ಸಂದೇಶಗಳ ಫಲಕಗಳನ್ನು ಅಳವಡಿಸಬೇಕು ಎಂದು ಸಾರ್ವಜನಿಕ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಆಗ್ರಹಿಸಿದ್ದಾರೆ.