ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ತಯಾರಿ ಪ್ರಾರಂಭಿಸಿವೆ. ಅದರಂತೆ ಬಿಜೆಪಿಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಲು ರಾಜಾಹುಲಿ ಯಡಿಯೂರಪ್ಪನವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಸಹ ಚುನಾವಣಾ ತಯಾರಿ ಪ್ರಾರಂಭಿಸಿದ್ದಾರೆ.
ಕಳೆದ ತಿಂಗಳು ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿದ ಮೇಲೆ ವಿಜಯೇಂದ್ರ ಕ್ಷೇತ್ರದಲ್ಲಿ ಫುಲ್ ಆ್ಯಕ್ಟಿವ್ ಆಗಿದ್ದಾರೆ.
ಇಂದು ಶಿಕಾರಿಪುರದ ಬಿಜೆಪಿಯ ಮಹಾಶಕ್ತಿ ಕೇಂದ್ರಗಳ ಸಭೆಯನ್ನು ನಡೆಸಿದ್ದಾರೆ. ಇಂದು ವಿಜಯೇಂದ್ರ ಅವರು ಹೊಸೂರು ಮಹಾಶಕ್ತಿ ಕೇಂದ್ರ ಹಾಗೂ ಕಪ್ಪನಹಳ್ಳಿ ಶಕ್ತಿ ಕೇಂದ್ರಗಳ ಪೇಜ್ ಪ್ರಮುಖರ ಸಭೆಯಲ್ಲಿ ಭಾಗವಹಿಸಿದ್ದಾರೆ.
ಇತ್ತೀಚಿನ ಚುನಾವಣೆಗಳಲ್ಲಿ ಬಿಜೆಪಿ ಪೇಜ್ ಪ್ರಮುಖರ ನೇಮಕಾತಿ ಮಾಡಿಕೊಂಡು ಚುನಾವಣೆ ನಡೆಸುತ್ತಿದೆ. ಇದರಿಂದ ಬಿಜೆಪಿಯ ಕಾರ್ಯಕರ್ತರಲ್ಲಿ ಪೇಜ್ ಪ್ರಮುಖರ ಪಾತ್ರ ಮಹತ್ವ ಪಡೆದುಕೊಂಡಿದೆ. ಹೀಗಾಗಿ ವಿಜಯೇಂದ್ರ ಅವರು ಪೇಜ್ ಪ್ರಮುಖರ ಸಭೆಯನ್ನು ನಡೆಸುತ್ತಿದ್ದಾರೆ.
ಚುನಾವಣಾ ತಯಾರಿ:ವಿಜಯೇಂದ್ರ ಅವರು ಶಿಕಾರಿಪುರಕ್ಕೆ, ಹಬ್ಬ, ಚುನಾವಣೆ ಹಾಗೂ ಕುಟುಂಬದ ಪ್ರಮುಖ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದರು. ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾದ ಕಾರಣ ಶಿಕಾರಿಪುರಕ್ಕೆ ಹೆಚ್ಚು ಭೇಟಿ ನೀಡುತ್ತಿದ್ದಾರೆ. ಇದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸಿಗೆ ಕಾರಣವಾಗಿದೆ. ಶಿಕಾರಿಪುರದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಪಕ್ಷದ ತೀರ್ಮಾನವೇ ಅಂತಿಮ ಎಂದು ತಿಳಿಸಿದ ನಡುವೆಯೇ ವಿಜಯೇಂದ್ರ ಅವರು ಚುನಾವಣಾ ತಯಾರಿಯಲ್ಲಿರುವುದು ಕಂಡು ಬರುತ್ತಿದೆ.
ಓದಿ:ಚಿತ್ರದುರ್ಗದಲ್ಲಿ ಮಳೆ ಆರ್ಭಟ.. ಕೆರೆ ಕಾಲುವೆ ಒಡೆದು ಲಕ್ಷಾಂತರ ಕ್ಯೂಸೆಕ್ ನೀರು ವ್ಯರ್ಥ