ಶಿವಮೊಗ್ಗ:ರೈಲ್ವೆ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಗೆ ಅನೇಕ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕ್ರಿಯವಾಗಿದ್ದು, ಮುಂಬರುವ ದಿನಗಳಲ್ಲಿ ತಜ್ಞರ ಸಲಹೆ ಪಡೆದು ಜಿಲ್ಲೆಯನ್ನು ಪ್ರವಾಸಿಗರ ಆಕರ್ಷಕ ತಾಣವನ್ನಾಗಿಸಲು ಅಗತ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈಲ್ವೆ ಮತ್ತು ಪ್ರವಾಸಿ ತಾಣಗಳ ಅಭಿವೃದ್ದಿಗೆ ಈಗಾಗಲೇ ಕೈಗೊಳ್ಳಲಾಗಿರುವ ಯೋಜನೆಗಳ ಬಗ್ಗೆ ವಿವರಿಸಿದರು. ಜಿಲ್ಲೆಯ ಆಯ್ದ ನಾಲ್ಕು ಸ್ಥಳಗಳಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ವಿಶೇಷವಾಗಿ ನಗರದ ಉಷಾ ನರ್ಸಿಂಗ್ ಹೋಂ ಬಳಿ 60.76 ಕೋಟಿ ವೆಚ್ಚದಲ್ಲಿ, ಭದ್ರಾವತಿ ಸಮೀಪದ ಕಡದಕಟ್ಟೆಯಲ್ಲಿ 25.92 ಕೋ. ವೆಚ್ಚದಲ್ಲಿ, ಶಿವಮೊಗ್ಗ ನಗರದ ಕಾಶೀಪುರ ಸಮೀಪ 29.63 ಕೋಟಿ ವೆಚ್ಚದಲ್ಲಿ ಹಾಗೂ ವಿದ್ಯಾನಗರದ ರೈಲ್ವೆ ನಿಲ್ದಾಣದ ಹತ್ತಿರ 44.00 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುಮತಿ ದೊರೆತಿದೆ. ಅಲ್ಲದೇ ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ರಾಜ್ಯದಲ್ಲಿ ಆಯ್ದ 5 ಸ್ಥಳಗಳಲ್ಲಿ ರೈಲ್ವೆ ಕೋಚಿಂಗ್ ಮತ್ತು ಟರ್ಮಿನಲ್ ಸೆಂಟರ್ ಗಳಿದ್ದು, ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿಯೂ ಟರ್ಮಿನಲ್ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ 75 ಕೋಟಿ ಅನುದಾನ ಮಂಜೂರಾಗಿದೆ. ಈ ಸಂಬಂಧ ಭೂಸ್ವಾದೀನ ಪ್ರಕ್ರಿಯೆ ಇನ್ನೂ ಒಂದು ವಾರದೊಳಗೆ ಪೂರ್ಣಗೊಳ್ಳುವ ವಿಶ್ವಾಸ ತಮಗಿರುವುದಾಗಿ ತಿಳಿಸಿದ ಅವರು, ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಸರ್ವೇ ಕಾರ್ಯವು 2 ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಶಿಕಾರಿಪುರ ಮತ್ತು ಶಿವಮೊಗ್ಗ ಹಾಗೂ ಎರಡನೇ ಹಂತದಲ್ಲಿ ಶಿಕಾರಿಪುರ ಮತ್ತು ರಾಣೆಬೆನ್ನೂರು ಮಾರ್ಗದ ಸರ್ವೇಕಾರ್ಯ ನಡೆಯಲಿದೆ. ಈಗಾಗಲೇ ಮೊದಲ ಹಂತದಲ್ಲಿ ಬರುವ 14 ಹಳ್ಳಿಗಳಲ್ಲಿ ಕಂದಾಯ ಮತ್ತು ರೈಲ್ವೆ ಇಲಾಖೆಗಳ ಜಂಟಿ ಸರ್ವೇ ಕಾರ್ಯ ಪೂರ್ಣಗೊಂಡಿದೆ. 8 ಗ್ರಾಮಗಳಿಗೆ ಅಂತಿಮ ಹಂತದ ನೋಟೀಫಿಕೇಶನ್ ಕೂಡ ಆಗಿದೆ. ಮುಂದಿನ ಒಂದು ತಿಂಗಳಲ್ಲಿ ಭೂ ಪರಿಹಾರ ನೀಡಿ ಈ ಭಾಗದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಅನೇಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಯೋಗ್ಯವಾಗಿವೆ. ಅವುಗಳಲ್ಲಿ ಪ್ರಮುಖವಾದ ಕೆಲವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ ಜೋಗದ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು 150 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇಲ್ಲಿನ 22 ಎಕರೆ ಪ್ರದೇಶದಲ್ಲಿ ವೀಕ್ಷಣಾಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ಅವಕಾಶ ಹಾಗೂ ಮಳೆಗಾಲವನ್ನು ಹೊರತುಪಡಿಸಿ ವರ್ಷ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ಜಲಪಾತಕ್ಕೆ ನೀರು ಹರಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರವು ಮುಂದಿನ ಬಜೆಟ್‍ನಲ್ಲಿ ಘೋಷಿಸುವ ನಿರೀಕ್ಷೆ ಇದೆ ಎಂದರು.