ಶಿವಮೊಗ್ಗ:ಹೈಕೋರ್ಟ್ ಆದೇಶದ ಹಿನ್ನೆಲೆ ಸಿಗಂದೂರಿನ ಅಕ್ರಮ ಕಟ್ಟಡವನ್ನು ತೆರವು ಮಾಡಲಾಯಿತು.
ಹೈಕೋರ್ಟ್ ಆದೇಶದಂತೆ ಸಿಗಂದೂರು ಅಕ್ರಮ ಕಟ್ಟಡ ತೆರವು ಸಾಗರ ತಾಲೂಕು ಶರಾವತಿ ಹಿನ್ನಿರಿನ ಪ್ರದೇಶದಲ್ಲಿನ ಪ್ರಸಿದ್ಧ ಸಿಗಂದೂರು ದೇವಾಲಯದ ಆಡಳಿತ ಮಂಡಳಿ ಸ. ನಂ.65 ರಲ್ಲಿ ಭೂಮಿ ಒತ್ತುವರಿ ಮಾಡಿ,ಅಕ್ರಮ ಕಟ್ಟಡ ನಿರ್ಮಾಣಮಾಡಲಾಗಿದೆ ಎಂದು ಶಿವರಾಜ್ ತುಮರಿ, ಗೋವರ್ಧನ ಅರಬಳ್ಳಿ, ಲಕ್ಷ್ಮೀನಾರಾಯಣ ಮಂಕಳಲೆ ಸೇರಿದಂತೆ ಇತರರು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ದೇವಸ್ಥಾನ ಕಟ್ಟಡ ಹಾಗೂ ಸಂಪರ್ಕಿಸುವ ರಸ್ತೆಯನ್ನು ಬಿಟ್ಟು ಹೊರತು ಪಡಿಸಿ, ದೇವಸ್ಥಾನದ ಎದುರು ನಿರ್ಮಿಸಿದ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನು ತೆರವು ಗೊಳಿಸಿ ವರದಿ ನೀಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿತ್ತು. ಈ ಹಿನ್ನೆಲೆ ಸಾಗರ ತಹಶೀಲ್ದಾರ್ ಪೊಲೀಸರ ನೆರವಿನಿಂದ ಅಕ್ರಮ ಕಟ್ಟಡವನ್ನು ತೆರವು ಮಾಡಿದ್ದಾರೆ.
ದೇವಾಲಯದ ಬಳಿ ಇದ್ದ ಹೋಟೆಲ್ ಸೇರಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡುವಾಗ ವಿರೋಧಗಳು ವ್ಯಕ್ತವಾಗಿದೆ. ಆದರೆ, ಪೊಲೀಸರು ಹೈ ಕೋರ್ಟ್ ಆದೇಶ ಪಾಲಿಸುತ್ತಿರುವುದಾಗಿ ತಿಳಿಸಿ ಅಕ್ರಮ ಕಟ್ಟಡ ತೆರವುಗೊಳಿಸಿದ್ದಾರೆ.