ಶಿವಮೊಗ್ಗ:ಸಹ್ಯಾದ್ರಿಯ ತಪ್ಪಲಿನಲ್ಲಿ ವಿಮಾನದ ಹಾರಾಟದ ರೆಕ್ಕೆಗಳನ್ನು ನೋಡಬೇಕು ಎನ್ನುವ ಮಲೆನಾಡ ಜನರ ಕನಸು ಈಡೇರುವ ಸಮಯ ಹತ್ತಿರವಾಗಿದೆ. ತಾಲೂಕಿನ ಸೋಗಾನೆಗಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯು ಅಂತಿಮ ಹಂತಕ್ಕೆ ಬಂದಿದ್ದು, ಫೆಬ್ರುವರಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಅದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.
ಅಂತೆಯೇ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಜಿಲ್ಲೆಯ ವಿವಿಧ ಮಠಾಧೀಶರೊಂದಿಗೆ ವಿಮಾನ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದರು. ಮುರುಘಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲೆಯ 20 ಸ್ವಾಮೀಜಿಗಳು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ವಿಮಾನ ನಿಲ್ದಾಣದ ಕಾಮಗಾರಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವುದರಿಂದ ಜಿಲ್ಲೆಯ ಬೆಳವಣಿಗೆ ಸಹಾಯಕವಾಗುತ್ತದೆ ಎಂಬ ಅಭಿಪ್ರಾಯವನ್ನು ಸ್ವಾಮೀಜಿಗಳು ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ವೀಕ್ಷಿಸಿದ ಎಲ್ಲ ಸ್ವಾಮೀಜಿಗಳಿಗೆ ಬಿವೈ ಸಹೋದರರು ಸನ್ಮಾನ ಮಾಡಿದರು.
ವಿಮಾನ ನಿಲ್ದಾಣ ಫೆ.27 ಕ್ಕೆ ಉದ್ಘಾಟನೆ:ವಿಮಾನ ನಿಲ್ದಾಣದ ಕಾಮಗಾರಿಯು ಪೂರ್ಣವಾಗಿದ್ದು, ಕೆಲ ಸಣ್ಣ ಪುಟ್ಟ ಕಾಮಗಾರಿಯಷ್ಟೇ ಬಾಕಿ ಉಳಿದುಕೊಂಡಿದೆ. ಇದರಿಂದ ಫೆ.27ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಯಿಸಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ತಯಾರಿ ಮಾಡಲಾಗುತ್ತಿದೆ. ಹಾಲಿ ಏರ್ಪೋರ್ಟ್ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಅನುಮತಿ ನೀಡಬೇಕಿದೆ. ಶಿವಮೊಗ್ಗ ವಿಮಾನ ನಿಲ್ದಾಣದ ರನ್ ವೇ 3200 ಮೀಟರ್ ಇದ್ದು, ಇದು ಬೆಂಗಳೂರು ಬಿಟ್ಟರೆ ಎರಡನೇ ಅತಿದೊಡ್ಡ ರನ್ ವೇ ಆಗಿದೆ. ಅಲ್ಲದೇ ರಾತ್ರಿ ವೇಳೆ ಲ್ಯಾಂಡಿಂಗ್ ಮಾಡಲು ಸಹ ಅನುಕೂಲವಿದೆ. ಸದ್ಯ ಸ್ಟಾರ್ ಏರ್ ವೇಸ್ ವಿಮಾನ ಸೇರಿದಂತೆ ಇತರ ವಿಮಾನ ಕಂಪನಿಗಳು ಶಿವಮೊಗ್ಗ ಏರ್ಪೋರ್ಟ್ಗೆ ಬರಲು ಒಪ್ಪಿಗೆ ನೀಡಿವೆ. ಮುಂದೆ ಇನ್ನಷ್ಟು ವಿಮಾನ ಕಂಪನಿಗಳು ಬರಲಿವೆ. ಸದ್ಯ ಶಿವಮೊಗ್ಗ ಜಿಲ್ಲೆಯ ಜನತೆ ಏರ್ಪೋರ್ಟ್ ಉದ್ಘಾಟನೆಗೆ ಕಾಯುತ್ತಿದ್ದಾರೆ.