ಶಿವಮೊಗ್ಗ:ಪ್ರತ್ಯೇಕ ಪ್ರಕರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಕೊನಗನವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ನಿವಾಸಿ ಲೋಕೇಶ್(32) ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ವರ್ಷದ ಯುವಕ ಸಾವನ್ನಪ್ಪಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಲೋಕೇಶ್ ಭಾನುವಾರ ರಜೆ ಇದ್ದ ಕಾರಣ ಕೊನಗನವಳ್ಳಿ ಗ್ರಾಮದಲ್ಲಿ ಆಯೋಜನೆಯಾಗಿದ್ದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ. ಈ ವೇಳೆ ಲೋಕೇಶ್ಗೆ ಹೋರಿ ಎದುರುಗಡೆಯಿಂದ ಬಂದು ಎದೆಗೆ ಗುದ್ದಿದೆ. ಇದರಿಂದ ಲೋಕೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಯನೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಲೋಕೇಶ್ ಸಾವನ್ನಪ್ಪಿದ್ದಾರೆ.
ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು: ಲೋಕೇಶ್ಗೆ ಪತ್ನಿ ಹಾಗೂ 5 ವರ್ಷ ಮತ್ತು 3 ವರ್ಷದ ಇಬ್ಬರು ಗಂಡು ಮಕ್ಕಳು ಹಾಗೂ ಒಂದೂವರೆ ವರ್ಷದ ಒಂದು ಹೆಣ್ಣು ಮಗುವಿದೆ. ಕುಟುಂಬಕ್ಕೆ ಲೋಕೇಶ್ ಅವರೇ ಆಧಾರವಾಗಿದ್ದರು. ಹೋರಿ ಬೆದರಿಸುವ ಸ್ಪರ್ಧೆ ಅಯೋಜಕರ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಲೋಕೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಲೋಕೇಶ್ ಕುಟುಂಬಸ್ಥರ ದುಃಖ ಮುಗಿಲುಮುಟ್ಟಿದೆ. ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲಾಡಳಿತ ಇಂತಹ ಅಪಾಯಕಾರಿ ಸ್ಪರ್ಧೆಗಳಿಗೆ ಬ್ರೇಕ್ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಮೃತ ಲೋಕೇಶ್ ಪತ್ನಿ ಚಂದ್ರಮ್ಮ ಹೋರಿ ಬೆದರಿಸುವ ಸ್ಪರ್ಧೆ ಆಯೋಜಕರ ವಿರುದ್ಧ ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ಎಂಬ ಯುವಕ ಸಾವನ್ನಪ್ಪಿದ್ದಾನೆ. ಈತ ಮಾಳೂರು ಗ್ರಾಮದ ನಿವಾಸಿಯಾಗಿದ್ದಾನೆ. ಈತ ಗ್ರಾಮದಲ್ಲಿ ಸಣ್ಣದೊಂದು ಕ್ಯಾಂಟೀನ್ ನಡೆಸುತ್ತಿದ್ದ. ಜನವರಿ 14ರಂದು ನಡೆದ ಸ್ಪರ್ಧೆ ನೋಡಲು ಹೋದಾಗ ಓಡುತ್ತಿದ್ದ ಹೋರಿಯು ರಂಗನಾಥ್ನ ಹೊಟ್ಟೆ ಸೀಳಿಕೊಂಡು ಹೋಗಿದೆ.
ತೀವ್ರ ಗಾಯಗೊಂಡ ಯುವಕನನ್ನು ತಕ್ಷಣ ಶಿರಾಳಕೊಪ್ಪದ ಆಸ್ಪತ್ರೆಗೆ ಸೇರಿಸಿ, ಬಳಿಕ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಸರಿಯಾಗಿ ಚಿಕಿತ್ಸೆ ಇಲ್ಲದ ಕಾರಣ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ರಂಗನಾಥ್ ಸಾವನ್ನಪ್ಪಿದ್ದಾನೆ. ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಮೃತ ರಂಗನಾಥ್ನ ಮಾವ ಆಯೋಜಕರ ವಿರುದ್ಧ ದೂರು ದಾಖಲಿಸಿದ್ದಾರೆ.