ಶಿವಮೊಗ್ಗ :ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಹೆಸರಿಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸದನದಲ್ಲಿ ಈಗಾಗಲೇ ನಾನೇ ಈ ವಿಷಯ ಪ್ರಸ್ತಾಪಿಸಿ ಕೇಂದ್ರಕ್ಕೆ ಕಳುಹಿಸಿದ್ದೇನೆ. ಫೆ. 27ರಂದು ಪ್ರಧಾನಿಗಳಿಂದ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಘೋಷಣೆ ಮಾಡಿಸುತ್ತೇವೆ ಎಂದರು.
ಶಿವಮೊಗ್ಗದಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.27 ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿಗಳು ಬರುವುದು ನಿಶ್ಚಿತ. ಅದೇ ದಿನ, ಇಪ್ಪತ್ತನೆೇ ಶತಮಾನ ಕಂಡ ಕವಿಸಂತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗ ಕುವೆಂಪು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕಿಡಲು ತೀರ್ಮಾನಿಸಿದ್ದೇವೆ. ಸರ್ವಾನುಮತದಿಂದ ತೀರ್ಮಾನಿಸಿ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.
ಕುವೆಂಪು ಅವರು ತಮ್ಮ ಕವಿತೆ, ಬರವಣಿಗೆಗಳ ಮೂಲಕ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅದನ್ನು ಜಾರಿಗೆ ತರಲು ಪ್ರಧಾನಿಗಳು ಹಗಲಿರುಲು ಶ್ರಮಿಸುತ್ತಿದ್ದಾರೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿಗಳ ಹೆಸರಿಡುವ ಕುರಿತು ಸದನದಲ್ಲಿ ನಾನೇ ಪ್ರಸ್ತಾಪಿಸಿ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದರು. ಇದೇ ವೇಳೆ, ವಿಮಾನ ನಿಲ್ದಾಣವನ್ನು ಅತಿ ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ನಿರ್ಮಿಸಲಾಗಿದೆ. ನೈಟ್ ಲ್ಯಾಂಡಿಂಗ್ಗೆ ಬೇಕಿರುವ ಎಲ್ಲಾ ಸೌಕರ್ಯಗಳಿವೆ ಎಂದು ಮಾಹಿತಿ ನೀಡಿದರು.