ಶಿವಮೊಗ್ಗ:ಇಡಿ ನಡೆಯನ್ನು ಪ್ರಶ್ನಿಸಿ ಬೀದಿಗಿಳಿದಿರುವಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಸೋಲು ನಿಶ್ಚಿತ. ಸೋಲಿನ ಭಯದಿಂದ ಇಲ್ಲ-ಸಲ್ಲ ಕಾರಣಗಳನ್ನು ತಂದಿಡುವ ಮೂಲಕ ಪ್ರತಿಭಟನೆ ಅಂತಹ ಗಲಾಟೆ ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯವು ತನ್ನ ಕೆಲಸವನ್ನು ತಾನು ನಿರ್ವಹಿಸುತ್ತಿದೆ. ಸೋನಿಯಾ ಗಾಂಧಿ ಆಗಲಿ ಅಥವಾ ರಾಹುಲ್ ಗಾಂಧಿ ಆಗಲಿ ತಪ್ಪು ಮಾಡದಿದ್ದರೆ ಚಿಂತೆ ಮಾಡುವಂತಹ ಅಗತ್ಯವಿಲ್ಲ. ಇಡಿ ನೋಟಿಸ್ ನೀಡಿದರೂ ಧರಣಿ ಮಾಡುವುದು, ಪ್ರತಿಭಟನೆ ಮಾಡುವುದು ಕಾಂಗ್ರೆಸ್ ನಾಯಕರಿಗೆ ಶೋಭೆ ತರುವಂತಹದ್ದಲ್ಲ ಎಂದರು.
ಇದನ್ನೂ ಓದಿ:ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ
ಅವರು ಇಂತಹ ಎಷ್ಟೇ ಸರ್ಕಸ್ ಮಾಡಿದರೂ ಮುಂದಿನ ದಿನಮಾನಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರುವುದನ್ನು ತೆಡೆಯಲು ಸಾಧ್ಯವಿಲ್ಲ. ಸ್ಪಷ್ಟ ಬಹುಮತದೊಂದಿಗೆ ನಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
ಕಾಂಗ್ರೆಸ್ ನಾಯಕರು ಈಗಾಗಲೇ ಭ್ರಮೆಯಲ್ಲಿದ್ದಾರೆ. ಅದೇ ಭ್ರಮೆಯಲ್ಲಿ ನಾನು ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ವರ್ತನೆಯನ್ನು ರಾಜ್ಯದ ಜನರು ನೋಡುತ್ತಿದ್ದಾರೆ. ಅವರು ಹಾಗೆ ಕಚ್ಚಾಡುತ್ತಲೇ ಇರಲಿ. ಜನರು ಬುದ್ಧಿ ಕಲಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಮೇಶ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಅವರ ಮಾತಿನಿಂದ ಕಾಂಗ್ರೆಸ್ ಮತ್ತೆ ಸಂಪೂರ್ಣ ಬೆತ್ತಲೆ ಆಗಿದೆ. ಹಣ ಮಾಡಿಕೊಂಡಿರುವ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಭ್ರಷ್ಟಾಚಾರದ ಉದಾರಹಣೆಗೆ ಇದಕ್ಕಿಂತ ಮತ್ತೊಂದು ಬೇಕಿಲ್ಲ. ಅಧಿಕಾರಿಕ್ಕೆ ಬಂದ ಬಳಿಕ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಹಗಲು ಧರೋಡೆ ಮಾಡಿದೆ ಅನ್ನೋದಕ್ಕೆ ರಮೇಶ್ ಕುಮಾರ್ ಹೇಳಿಕೆಯೇ ಸಾಕ್ಷಿ.
ರಾಜ್ಯದ ಜನರ ಮುಂದೆ ಇದೇ ವಿಷಯವನ್ನು ತೆಗೆದುಕೊಂಡು ಹೋಗುತ್ತೇವೆ. ಜನರು ತೀರ್ಮಾನ ಮಾಡಲಿ. ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ಬೇಕಾ ಅಥವಾ ಪಾರದರ್ಶಕ ಆಡಳಿತ ನೀಡುವ ಸರ್ಕಾರ ಬೇಕಾ ಎಂದು ಅವರೇ ತೀರ್ಮಾನಿಸಲಿ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.
ಇದೇ ವೇಳೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಕ್ಷೇತ್ರ ಬಿಟ್ಟುಕೊಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ ಈವರೆಗೆ ಕ್ಷೇತ್ರದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದರು. ಮುಂದಿನ ಚುನಾವಣೆಯಲ್ಲಿ ನಾನು ಶಿಕಾರಿಪುರದಿಂದ ಸ್ಪರ್ಧಿಸುವುದಿಲ್ಲ. ವಿಜಯೇಂದ್ರ ಅವರೇ ಸ್ಪರ್ಧಿಸುತ್ತಾರೆ. ನನಗಿಂತ ಹೆಚ್ಚು ಅಂತರದಲ್ಲಿ ಗೆಲ್ಲಿಸಿಕೊಡಬೇಕೆಂದು ಶಿಕಾರಿಪುರದ ಜನರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡರು.