ಶಿವಮೊಗ್ಗ: ನಿನ್ನೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ನಡೆಸಿದ ಎಸ್‌ಸಿ, ಎಸ್‌ಟಿ ಸಮಾವೇಶಕ್ಕೆ ಬೆಲೆ ಎಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾಡುವ ಪ್ರತಿ ಕೆಲಸಕ್ಕೂ ಟೀಕೆ ಮಾಡ್ತಾರೆ. ಎಸ್‌ಸಿ, ಎಸ್‌ಟಿ ಬಗ್ಗೆ ಮಾಡಿರುವ ತೀರ್ಮಾನವನ್ನು ತಿರುಚಿ ಮನಬಂದಂತೆ ಒಬ್ಬ ರಾಷ್ಟ್ರೀಯ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ. ಅದು ಎಷ್ಟು ಸರಿಯೆಂಬುದು ಅರ್ಥವಾಗದ ವಿಷಯ. ನಾವು ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದರು.
ನಮ್ಮ ನಿಲುವು ಸ್ಪಷ್ಟ:ಕಾಂಗ್ರೆಸ್ನವರು ವಾಸ್ತವ ಅರಿತು ಮಾತನಾಡಲಿ. ನೀವಂತೂ ಮಾಡಲಿಲ್ಲ. ನಾವು ಮಾಡಿದನ್ನು ಸ್ವಾಗತಿಸಬೇಕಿತ್ತು. ಟೀಕೆ, ಟಿಪ್ಪಣಿ ಮಾಡುವುದು ಅವರಿಗೆ ಗೌರವ ತರುವಂತದ್ದಲ್ಲ. ಮೀಸಲಾತಿ ಬಗ್ಗೆ ಯಾವುದೇ ಗೊಂದಲವಿಲ್ಲ. ಎಸ್‌ಸಿ, ಎಸ್‌ಟಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಅದರಂತೆ ನಾವು ಮುಂದೆ ಹೋಗುತ್ತೇವೆ ಎಂದು ಹೇಳಿದರು.
ಸ್ಯಾಂಟ್ರೋ ರವಿ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಆ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಕೊಂಡಿದ್ದೇನೆ. ಸಿಎಂ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ತಿಳಿಸಿದ್ದಾರೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಬಿಗಿ ಕ್ರಮ ತೆಗೆದುಕೊಂಡು ತಕ್ಕ ಪಾಠ ಕಲಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಸಚಿವರುಗಳು ಭಾಗಿಯಾಗಿರುವ ಕುರಿತು ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ತಿಳಿಸಿದರು.