ವಿಮಾನ ನಿಲ್ದಾಣ ಲೋಕಾರ್ಪಣೆ ಕುರಿತು ಮಾಧ್ಯಮದೊಂದಿಗೆ ಮಾತನಾಡುತ್ತಿರುವ ಬಿಎಸ್‌ವೈ ಹಾಗು ಬಿ.ವೈ.ರಾಘವೇಂದ್ರ ಶಿವಮೊಗ್ಗ:ಶಿವಮೊಗ್ಗ ಹೊರವಲಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕೆಲಸ ಅಂತಿಮ ಹಂತದಲ್ಲಿದೆ. ಬುಧವಾರ ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಅವರು ನಿಲ್ದಾಣ ಉದ್ಘಾಟಿಸುವರು ಎಂದು ತಿಳಿಸಿದರು.
ದೇಶದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಅಂದರೆ, 449 ಕೋಟಿ ರೂ ವ್ಯಯಿಸಿ ಈ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಇಲ್ಲಿ ರಾತ್ರಿ ವೇಳೆ ವಿಮಾನಗಳು ಇಳಿಯಲು ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಂತರದ ಅತಿದೊಡ್ಡ ವಿಮಾನ ನಿಲ್ದಾಣ ಇದಾಗಿದೆ. ಜಮೀನು ಕೊಟ್ಟ ರೈತರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಕಡಿಮೆಯೇ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಈಗಾಗಲೇ ಅಧಿಕಾರಿಗಳ ನೇಮಕ ಸಹ ಆಗಿದೆ. ಸಿಬ್ಬಂದಿಗೆ ಬೆಂಗಳೂರಿನಲ್ಲಿ ತರಬೇತಿ ನಡೆಯುತ್ತಿದೆ. ಒಂದು ವಾರದೊಳಗೆ ಅಧಿಕಾರಿಗಳು ಬಂದು ಭೇಟಿ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಈಗಾಗಲೇ ಏರ್‌ಲೈನ್ಸ್‌ಗಳ ಜೊತೆ ಮಾತುಕತೆ ನಡೆಯುತ್ತಿದ್ದು ಸ್ಟಾರ್ ಏರ್ ಲೈನ್ಸ್ ಸೇವೆ ನೀಡಲು ಮುಂದೆ ಬಂದಿದೆ. ಬೆಂಗಳೂರು, ಶಿವಮೊಗ್ಗ ನಡುವೆ ವಿಮಾನ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ನಿರ್ಮಾಣ ಹಂತದಲ್ಲಿರುವ ಶಿವಮೊಗ್ಗ ವಿಮಾನ ನಿಲ್ದಾಣ ಶಿಕಾರಿಪುರ-ರಾಣೇಬೆನ್ನೂರು ರೈಲ್ವೆ ಮಾರ್ಗಕ್ಕೆ ಚಾಲನೆ, ರೈಲ್ವೆ ಡಿಪೋ, ಸ್ಮಾರ್ಟ್ ಸಿಟಿ ಕಾಮಗಾರಿಗಳು ಸೇರಿದಂತೆ ಫೆ. 27ರಂದು 7,500 ಸಾವಿರ ಕೋಟಿ ರೂ ವೆಚ್ಚದ ಕಾಮಗಾರಿಗಳು ಲೋಕಾರ್ಪಣೆಗೊಳ್ಳಲಿವೆ. ಜಮೀನು ಕೊಟ್ಟ ರೈತರಿಗೆ ವಿಮಾನ ನಿಲ್ದಾಣ ಲೋಕಾರ್ಪಣೆ ವೇಳೆಗೆ ಮಾತುಕೊಟ್ಟಂತೆ ಸೈಟ್‌ಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಬಿಎಸ್‌ವೈ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ:ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ನಿಲ್ದಾಣ ನೋಡಲು ಬಂದ ಜನರು ಯಡಿಯೂರಪ್ಪ ಆಗಮಿಸುತ್ತಿದ್ದಂತೆ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಯಡಿಯೂರಪ್ಪ ನಗುತ್ತಲೇ ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟರು. ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಎಸ್.ರುದ್ರೇಗೌಡ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು, ಬಿಜೆಪಿ ಪಕ್ಷದ ಮುಖಂಡರು ಇದ್ದರು.
ಕಲಬುರಗಿ, ಯಾದಗಿರಿಗೆ ಇಂದು ಪ್ರಧಾನಿ: ಈ ವರ್ಷ ಮೋದಿಯವರ ಕರ್ನಾಟಕ ಪ್ರವಾಸ ಹೊಸ ದಾಖಲೆ ಎಂದರೆ ತಪ್ಪೇನಿಲ್ಲ. ಜನವರಿ 12 ರಂದು ರಾಜ್ಯಕ್ಕೆ ಪ್ರಧಾನಿ ಆಗಮಿಸಿದ್ದರು. ಇಂದು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಯಾದಗಿರಿ ಹಾಗು ಕಲಬುರಗಿಗೆ ಭೇಟಿ ನೀಡುತ್ತಿದ್ದಾರೆ. ಫೆಬ್ರವರಿಯಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದು ಒಟ್ಟು 2 ದಿನದ ಪ್ರವಾಸ ಇದಾಗಿರಲಿದೆ.
ಇದನ್ನೂ ಓದಿ:ಯಾದಗಿರಿ, ಕಲಬುರಗಿಗೆ ಇಂದು ಪ್ರಧಾನಿ ಮೋದಿ: ವಾರದಲ್ಲಿ 2ನೇ ಬಾರಿ ರಾಜ್ಯಕ್ಕೆ ಆಗಮನ