ಶಿವಮೊಗ್ಗ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭರವಸೆ ಕೊಟ್ಟು ಬಂದಿದ್ದೇವೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಯಶಸ್ವಿಯಾಗಿ ನಡೆಯಿತು ಎಂದರು.
ನಂತರ ಮಾತನಾಡಿದ ಅವರು, ದೇಶದ ಆಯಾ ರಾಜ್ಯಗಳ ಪರಿಸ್ಥಿತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ, ಮುಂದಿನ ಚುನಾವಣೆ ಗೆಲ್ಲುವ ಬಗ್ಗೆಯೂ ಚರ್ಚೆ ನಡೆಸಲಾಯಿತು. ಮೋದಿಯವರು ಸುಮಾರು ಒಂದು ಗಂಟೆಗಳ ಕಾಲ ನಮಗೆ ಮಾರ್ಗದರ್ಶನ ನೀಡಿದರು ಎಂದರು. ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಬಹಳ ಉತ್ಸಾಹದಿಂದ ನಾವೆಲ್ಲರೂ ವಾಪಸ್ ಬಂದಿದ್ದೇವೆ ಎಂದರು.
ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇಬೇಕು, ಮುಂದಿನ ಚುನಾವಣೆಗಾಗಿ ಮೋದಿ ಹಾಗೂ ಅಮಿತ್ ಶಾ ಹೆಚ್ಚಿನ ಸಮಯವನ್ನು ಕೊಡುತ್ತಾರೆ ಎಂದರು. ಪ್ರಧಾನಿ ಮೋದಿಜೀ ಹಾಗೂ ಅಮಿತ್ ಷಾ ಅವರ ಸಮಯವನ್ನು ಸದುಪಯೋಗ ಪಡಿಸಿಕೊಂಡು 150 ಸ್ಥಾನ ಗೆಲ್ಲುತ್ತೇವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಭರವಸೆ ಕೊಟ್ಟು ಬಂದಿದ್ದೇವೆ. ಈ ವಿಶ್ವಾಸ ನನಗಿದೆ, ಅದರಂತೆ ಕೆಲಸ ಮಾಡುತ್ತೇವೆ ಎಂದರು.
ಅಲ್ಪಸಂಖ್ಯಾತರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ:ಮೋದಿಜಿ ಅವರು ನಮಗೆ ಅನೇಕ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ. ಸ್ಥಳೀಯ ಕಾರ್ಯಕರ್ತರು ಹಾಗೂ ಶಾಸಕರು ಹೆಚ್ಚಿನ ಕೆಲಸ ಮಾಡಬೇಕಿದೆ, ಆಗ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದರು. ಮನೆ ಮನೆಗೆ ಕಾರ್ಯಕರ್ತರು ಭೇಟಿ ಮಾಡಿ ಪಕ್ಷದ ಕುರಿತು ಪ್ರಚಾರ ನಡೆಸಬೇಕು ಎಂದರು. ಈಗಾಗಲೇ ನಾವು ಚುನಾವಣಾ ಕೆಲಸ ಪ್ರಾರಂಭಿಸಿದ್ದೇವೆ. ಅಲ್ಪಸಂಖ್ಯಾತರನ್ನು ಕೂಡ ನಮ್ಮ ಜೊತೆ ಕರೆದುಕೊಂಡು ಹೋಗುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ. ಈ ಬಗ್ಗೆ ಮೋದಿಜಿ ಅವರು ನಮಗೆ ಸಲಹೆ ನೀಡಿದ್ದಾರೆ. ಈಗಾಗಲೇ ನಾವು ಮುಸ್ಲಿಂ ಬಾಂಧವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ, ಹಾಗೆ ನಮ್ಮ ಬಗ್ಗೆ ಅವರಿಗೂ ಗೌರವವಿದೆ ಎಂದರು.
ವಿಜಯೇಂದ್ರ ಅವರ ಕುರಿತು ಚರ್ಚೆ ನಡೆದಿಲ್ಲ: ವಿಜಯೇಂದ್ರ ಅವರ ಕುರಿತು ಯಾವುದೇ ವಿಚಾರಗಳು ಆ ಸಭೆಯಲ್ಲಿ ಚರ್ಚೆ ಆಗಿಲ್ಲ. ಅದಕ್ಕೆ ಸಮಯವೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು. ಗುಜರಾತ್ ಚುನಾವಣೆಯಲ್ಲಿ ಹಿರಿಯ ಶಾಸಕರು ಹಾಗೂ ನಾಯಕರುಗಳಿಗೆ ಕೋಕ್ ನೀಡಿರುವ ವಿಚಾರ ನನಗೆ ಗೂತ್ತಿಲ್ಲ ಎಂದ ಅವರು, ಹರಿಪ್ರಸಾದ್ ಹೇಳಿಕೆ ಕುರಿತು ನಾನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನಾ ವಿಚಾರ: ಶಿವಮೊಗ್ಗದ ವಿಮಾನ ನಿಲ್ದಾಣದ ಎಲ್ಲ ಕೆಲಸ ಪೂರ್ಣ ಆಗಿದೆ. ಇದರ ಉದ್ಘಾಟನೆಗೆ ಪ್ರಧಾನಿಗಳು ಒಂದು ದಿನ ಸಮಯವನ್ನು ಕೊಡಬಹುದು. ಮುಂದಿನ ತಿಂಗಳು 27 ರ ಒಳಗೆ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ ಎಂದರು. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ ಎಂದೂ ಇದೇ ವೇಳೆ ಅವರು ಹೇಳಿದರು.