ಶಿವಮೊಗ್ಗ:ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕ್ ಅವರ ಅಕ್ಷರ ಶಾಲೆಯ ಆಡಳಿತ ಮಂಡಳಿಯು ದೇವತೆಗಳಿಗೆ ಅಪಮಾನ ಮಾಡಿದೆ. ಇಲ್ಲಿನ ಶಾಲೆಯ ಬಳಿಯ ಬೇವಿನ ಮರದ ಕೆಳಗೆ ಇದ್ದ ದೇವರಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಚನ್ನಮುಂಭಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಶಾಸಕ ಆಶೋಕ ನಾಯ್ಕ್ ಅವರು ಶಿವಮೊಗ್ಗ ತಾಲೂಕು ಚನ್ನಮುಂಭಾಪುರ ಗ್ರಾಮದಲ್ಲಿ ಶಾಲೆ ಮತ್ತು ಕಾಲೇಜನ್ನು ನಿರ್ಮಾಣ ಮಾಡಿದ್ದಾರೆ.
ಈ ಶಾಲೆಯನ್ನು ಗ್ರಾಮಸ್ಥರು ಆರಾಧಿಸುವ ಚೌಡೇಶ್ವರಿ ಹಾಗೂ ಭೂತೇಶ್ವರ ಗುಡಿ ಪಕ್ಕದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಶಾಲೆಯ ಪಕ್ಕದಲ್ಲೇ ಪುರಾತನವಾದ ಕೆರೆ ಇದೆ. ಈ ಕೆರೆಯ ಏರಿ ಮೇಲೆ ಇರುವ ಬೇವಿನ ಮರದ ಕೆಳಗೆ ಚೌಡೇಶ್ವರಿ ಹಾಗೂ ಭೂತೇಶ್ವರ ದೇವತೆಗಳಿವೆ. ಕಳೆದ ಫೆಬ್ರವರಿ 21ರಂದು ಈ ದೇವತೆಗಳನ್ನು ಶಾಸಕ ಅಶೋಕ ನಾಯ್ಕ್ ಒಡೆತನದ ಶಾಲೆಯವರು ಕಿತ್ತು ಹಾಕಿದ್ದಾರೆ. ಈ ಮೂಲಕ ದೇವತೆಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ಚನ್ನಮುಂಭಾಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಶಿವಮೊಗ್ಗ ಡಿಸಿ ಕಚೇರಿಯವರೆಗೂ ಸುಮಾರು 8 ಕಿಮೀ ಪಾದಯಾತ್ರೆ ನಡೆಸಿದರು.
ಪಾದಯಾತ್ರೆಯಲ್ಲಿ ಶಾಸಕ ಅಶೋಕ ನಾಯ್ಕ್ ಪ್ರತಿಕೃತಿಯ ಶವಯಾತ್ರೆ ನಡೆಸಲಾಯಿತು. ಬಳಿಕ ನಗರದ ಮಹಾವೀರ ವೃತ್ತದಲ್ಲಿ ಪ್ರತಿಕೃತಿಯನ್ನು ಸುಟ್ಟು ಹಾಕುವ ಮೂಲಕ ಆಕ್ರೋಶ ಹೊರ ಹಾಕಿದರು. ದೇವತೆಗಳಿಗೆ ಅಪಮಾನ ಮಾಡಿರುವ ಅಶೋಕ ನಾಯ್ಕ್ ಅವರು ಈಗಾಗಲೇ ದೇವರನ್ನು ತೆರವುಗೊಳಿಸಿರುವ ಜಾಗದಲ್ಲಿಯೇ ಮತ್ತೆ ದೇವತೆಗಳನ್ನು ಪ್ರತಿಷ್ಠಾಪಿಸುವಂತೆ ಆಗ್ರಹಿಸಿದ್ದಾರೆ. ಬಳಿಕ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ಬಂದು ದೇವತೆಗಳನ್ನು ಕಿತ್ತು ಹಾಕಿದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.