ಶಿವಮೊಗ್ಗ: ಇನ್ಸ್ಟಾಗ್ರಾಂನಲ್ಲಿ ಅಪರಿಚಿತ ಯುವಕ ಬ್ಲ್ಯಾಕ್ಮೇಲ್ ಮಾಡಿದ ಪರಿಣಾಮ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿಕಾರಿಪುರ ತಾಲೂಕು ತೂಗರ್ಸಿಯಲ್ಲಿ ನಡೆದಿದೆ. 23 ವರ್ಷದ ಪದವಿ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಯುವಕನೋರ್ವ ಈಕೆಯ ಬೆತ್ತಲೆ ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದು, ಇಲ್ಲದಿದ್ದಲ್ಲಿ ತಾನೇ ಆಕೆಯ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದನಂತೆ. ಇದರಿಂದ ದೊಡ್ಡ ದುರಂತವೇ ನಡೆದಿದೆ.
ಈತ ತನ್ನ dilatco ph ಎಂಬ ಖಾತೆಯಿಂದ ಯುವತಿಗೆ ಫೋನ್ ಮಾಡಿ 'ನಿನ್ನ ಬೆತ್ತಲೆ ಫೋಟೋ ಕಳುಹಿಸು, ನಿನ್ನ ಫೋಟೋ ಕಳುಹಿಸದೆ ಹೋದರೆ ನಾನೇ ನಿನ್ನೆ ಫೋಟೋ ಎಡಿಟ್ ಮಾಡಿ ಎಲ್ಲಾ ಕಡೆ ಹರಿಬಿಡುತ್ತೇನೆ' ಎಂದು ಬೆದರಿಸಿದ್ದ ಎನ್ನಲಾಗ್ತಿದೆ. ಇದರಿಂದ ಬೆದರಿದ ಯುವತಿ ಆ ಯುವಕನಿಗೆ ಇನ್ಸ್ಟಾಗ್ರಾಂನಿಂದ ಕರೆ ಮಾಡಿ ತನ್ನ ಬೆತ್ತಲೆ ವಿಡಿಯೋವನ್ನು ತೋರಿಸಿದ್ದಳಂತೆ.
ಇದನ್ನೇ ಆ ಯುವಕ ರೆಕಾರ್ಡ್ ಮಾಡಿಕೊಂಡು ಯುವತಿಗೆ ಪದೇ ಪದೇ ಬೆತ್ತಲೆ ವಿಡಿಯೋ ಕಾಲ್ಗೆ ಬಾ, ನಿನ್ನ ಬೆತ್ತಲೆ ಫೋಟೋ ಕಳುಹಿಸು ಎಂದು ಪದೇ ಪದೇ ಬೆದರಿಕೆ ಹಾಕಿದ್ದಾನೆ. ನೀನು ತೋರಿಸದೆ ಹೋದರೆ ತನ್ನ ಬಳಿ ಇರುವ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ನಿನ್ನ ಬೆತ್ತಲೆ ಫೋಟೋ, ವಿಡಿಯೋ ಹರಿಬಿಡುವುದಾಗಿ ಬೆದರಿಸಿದ್ದಾನೆ.