ಕರ್ನಾಟಕ

karnataka

ETV Bharat / state

ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದ್ರೂ ಪ್ರಚಾರ ಮಾಡ್ತಿದ್ದೇವೆ: ಬಿ.ಎಲ್. ಸಂತೋಷ್​​ - BY raghavendra

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಂದು ಬಿಜೆಪಿ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಿದ್ದ ವಿವಿಧ ಸಮಾಜಗಳ ಸಾಮರಸ್ಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

bl-santhosh-speech-in-harmony-convention-of-different-societies
ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದರೂ ಪ್ರಚಾರ ಮಾಡುತ್ತಿದ್ದೇವೆ: ಬಿಎಲ್​​ ಸಂತೋಷ್​​

By

Published : Apr 30, 2023, 10:44 PM IST

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್

ಶಿವಮೊಗ್ಗ: ಈ ಬಾರಿಯ ಚುನಾವಣೆ ಫಲಿತಾಂಶದ ಕುರಿತು ಬಿಡುಗಡೆಯಾಗುತ್ತಿರುವ ಸರ್ವೆಗಳಿಂದ ನಮಗೆ ಆತಂಕವಿಲ್ಲ. ನಾವು ಗೆಲ್ಲುತ್ತೇವೆ ಎಂಬ ವಿಶ್ವಾಸವಿದ್ದರೂ ಪ್ರಚಾರ ಮಾಡುತ್ತಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು. ನಗರದ ಪೇಸ್ ಪಿಯು ಕಾಲೇಜಿನಲ್ಲಿಂದು ಬಿಜೆಪಿ ವತಿಯಿಂದ ಆಯೋಜಿಸಿದ್ದ ವಿವಿಧ ಸಮಾಜಗಳ ಸಾಮರಸ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಕ್ಕಿಪಿಕ್ಕಿ ಸಮುದಾಯದವರನ್ನು ಕರೆ ತರುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಕೇಂದ್ರ ಸರ್ಕಾರ ಆಪರೇಶನ್ ಕಾವೇರಿ ಮೂಲಕ ಸಮುದಾಯದ ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆ ತಂದಿದೆ. ಆದರೆ ಸಿದ್ದರಾಮಯ್ಯ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಲಿಲ್ಲ. ಒಳ ಮೀಸಲಾತಿ ವಿಷಯದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರಗಳನ್ನು ಮಾಡುತ್ತಿದ್ದಾರೆ. ಧರ್ಮದ ಆಧಾರದ ಮೇಲೆ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ಧೈರ್ಯದಿಂದ ತೆಗೆದು ಲಿಂಗಾಯತ ಸಮಾಜಕ್ಕೆ ನೀಡಿದ್ದೇವೆ ಎಂದು ಹೇಳಿದರು.

ಕೆಂಪೇಗೌಡ, ಟಿಪ್ಪು ದೇವನಹಳ್ಳಿಯಲ್ಲಿಯೇ ಹುಟ್ಟಿದ್ದರು. ಕಾಂಗ್ರೆಸ್‌ನವರು ಕೆಂಪೇಗೌಡ ಜಯಂತಿ ಮಾಡದೇ, ಟಿಪ್ಪು ಜಯಂತಿ ಮಾಡಿದರು. ಕೆಂಪೇಗೌಡರ ಜಯಂತಿ ಮಾಡಲು ಬಿಜೆಪಿ ಸರ್ಕಾರ ಬರಬೇಕಾಯಿತು. ಕೇವಲ ತುಷ್ಟೀಕರಣಕ್ಕೆ, ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್ ಈ ರೀತಿ ಮಾಡಿತು. ಆದರೆ ನಾವು ಎಲ್ಲ ಸಮಾಜಗಳನ್ನು ಸೇರಿಸಿಕೊಂಡು ಸುಂದರ ಸಮಾಜ ನಿರ್ಮಿಸಲು ಕೆಲಸ ಮಾಡುತ್ತೇವೆ ಎಂದರು.

ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದವರು ಉಂಡ ಮನೆಗೆ ದ್ರೋಹ ಬಗೆದವರು ಜೆಡಿಎಸ್ ಸೇರಿದ್ದಾರೆ. ಅವರೇ ಈ ಬಾರಿ ಅಭ್ಯರ್ಥಿಗಳಾಗಿದ್ದಾರೆ. ಸಮಾವೇಶದಲ್ಲಿ ನನ್ನ ಬದಲಾಗಿ ನಿಮಗೆ ಮಾರ್ಗದರ್ಶನ ಮಾಡಬೇಕಾದವರು ಜೆಡಿಎಸ್ ಪಕ್ಷ ಸೇರಿದ್ದಾರೆ ಎಂದು ಪರೋಕ್ಷವಾಗಿ ಆಯನೂರು ಮಂಜುನಾಥ್​​ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಬಿಟ್ಟು ಹೋದವರಲ್ಲಿ ಶಾಸಕ, ವಿಧಾನ ಪರಿಷತ್ ಸದಸ್ಯ, ರಾಜ್ಯಸಭೆ, ಲೋಕಸಭೆ ಸದಸ್ಯರಾದವರೂ ಇದ್ದಾರೆ. ಇವರಿಗೆ ಅಧಿಕಾರದ ದುರಾಸೆ. ಇವರನ್ನು ರಾಜಕೀಯವಾಗಿ ಉಳಿಸಬೇಕೇ ಎಂಬುದನ್ನು ತೀರ್ಮಾನಿಸುವ ಆಯ್ಕೆ ನಿಮ್ಮದು. ಇಂತಹವರಿಗೆ ಹೋಗುವ ಒಂದೊಂದು ಮತ ದೇಶದ ರಾಜಕೀಯವನ್ನು ಭ್ರಷ್ಟ ಮಾಡುತ್ತದೆ. ಇಂತಹ ಪಕ್ಷಗಳಿಗೆ ಮತ ನೀಡಿದರೆ ದ್ರೋಹ ಬಗೆದಂತೆ ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕು ಎನ್ನುವುದು ನಮ್ಮೆಲ್ಲರ ಗುರಿ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಚನ್ನಬಸಪ್ಪ ಅವರನ್ನು ಗೆಲ್ಲಿಸಬೇಕು. ಪ್ರತಿಪಕ್ಷಗಳು ಚುನಾವಣೆಗೋಸ್ಕರ ಸಂವಿಧಾನ ಶಿಲ್ಪಿ ಡಾ.ಬಿ.ಅರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿವೆ. ಹಳೆಯ ಇತಿಹಾಸವನ್ನು ಮುಚ್ಚಿಡುವ ಪ್ರಯತ್ನಗಳು ಪ್ರತಿಪಕ್ಷಗಳಿಂದ ನಡೆಯುತ್ತಿವೆ. ಇನ್ನಾದರೂ ನಾವೆಲ್ಲ ಎಚ್ಚೆತ್ತು, ನಿಜವಾದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಬೇಕು ಎಂದರು.

ಇದನ್ನೂ ಓದಿ:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೋದಿ ಭರ್ಜರಿ ರೋಡ್ ಶೋ: ಪ್ರಧಾನಿಗೆ ಹೂಮಳೆ

ABOUT THE AUTHOR

...view details