ಶಿವಮೊಗ್ಗ: ರಾಜ್ಯದಲ್ಲಿ ಚುನಾವಣಾ ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ಚೆನ್ನಾಗಿದೆ. ಈ ಬಾರಿ ಬಿಜೆಪಿ ಕನಿಷ್ಠ 130 ರಿಂದ 135 ಸ್ಥಾನ ಗೆಲ್ಲಲಿದೆ. ಶಿಕಾರಿಪುರದಲ್ಲಿ ವಿಜಯೇಂದ್ರ ಕನಿಷ್ಠ 40-45 ಸಾವಿರ ಅಂತರದಲ್ಲಿ ಗೆಲ್ಲುತ್ತಾನೆ ಎಂಬ ವಿಶ್ವಾಸವನ್ನು ಯಡಿಯೂರಪ್ಪ ವ್ಯಕ್ತಪಡಿಸಿದರು.
ಶಿಕಾರಿಪುರದಲ್ಲಿಂದು ನಟ ಸುದೀಪ್ ಅವರ ರೋಡ್ ಶೋದಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದು ಹೋದ ನಂತರ ವಾತಾವರಣ ಬದಲಾಗಿದೆ. ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ನಾನು ಈಗ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲು ತೆರಳುತ್ತಿದ್ದೇನೆ. ಬೆಂಗಳೂರಿನಲ್ಲಿ ಪ್ರಮುಖ ವಿಷಯದ ಕುರಿತು ಸುದ್ದಿಗೋಷ್ಠಿ ನಡೆಸುವಂತೆ ಕೇಂದ್ರದಿಂದ ಸೂಚನೆ ಬಂದ ಕಾರಣ ಬೆಂಗಳೂರಿಗೆ ತೆರಳುತ್ತಿರುವೆ. ಅದನ್ನು ಮುಗಿಸಿಕೊಂಡು ವಾಪಸ್ ಶಿಕಾರಿಪುರಕ್ಕೆ ಆಗಮಿಸುವೆ ಎಂದರು.
ಇದನ್ನೂ ಓದಿ :'ಬಿ.ಸಿ.ಪಾಟೀಲ್ 25 ರಿಂದ 30 ಸಾವಿರ ಮತಗಳಿಂದ ಜಯ ಸಾಧಿಸುತ್ತಾರೆ': ಬಿಎಸ್ವೈ
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, "ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಇದು ರಾಜ್ಯದ ಭವಿಷ್ಯ ರೂಪಿಸುವ ಚುನಾವಣೆಯಾಗಲಿದೆ. ಅಭಿವೃದ್ಧಿ ರಥ ತೆಗೆದುಕೊಂಡು ಹೋಗುವ ಮಹಾ ಚುನಾವಣೆಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ಕಾಂಗ್ರೆಸ್ 50-60 ವರ್ಷಗಳ ಕಾಲ ದೇಶವನ್ನು, ರಾಜ್ಯವನ್ನು ಆಳಿದೆ. ಆದರೆ, ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ದಿಕ್ಕನ್ನು ಬದಲಾಯಿಸಿದ್ದಾರೆ. ಈ ಬಾರಿ ರಾಜ್ಯದ ಜನ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ" ಎಂದು ಹೇಳಿದರು.