ಶಿವಮೊಗ್ಗ:ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಮೊದಲ ಬಾರಿಗೆ ತವರು ಕ್ಷೇತ್ರ ಶಿಕಾರಿಪುರಕ್ಕೆ ಬಿ ವೈ ವಿಜಯೇಂದ್ರ ಆಗಮಿಸಿದ ಹಿನ್ನೆಲೆ, ಶಿಕಾರಿಪುರ ತಾಲೂಕು ಬಿಜೆಪಿ ಘಟಕದಿಂದ ಭರ್ಜರಿ ಸ್ವಾಗತ ಕೋರಿದರು. ಶಿಕಾರಿಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗ ಬಿ ವೈ ವಿಜಯೇಂದ್ರ ಅವರಿಗೆ ಸ್ವಾಗತ ಕೋರಿದ ಕಾರ್ಯಕರ್ತರು, ತೆರೆದ ವಾಹನದಲ್ಲಿ ಬೈಕ್ ರ್‍ಯಾಲಿಯ ಮೂಲಕ ಶಿಕಾರಿಪುರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿದರು. ನಂತರ ಶಿಕಾರಿಪುರದ ಹಳೆ ಸಂತೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾದ ಆರ್ ಅಶೋಕ್ ಅವರಿಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಕೇಂದ್ರ ಸಂಸದಿಯ ಮಂಡಳಿ ಸದಸ್ಯರಾದ ಬಿ ಎಸ್ ಯಡಿಯೂರಪ್ಪ, ದೇವದುರ್ಲಬ ಕಾರ್ಯಕರ್ತರಿಂದ ವಿಜಯೇಂದ್ರ ಶಾಸಕರಾಗಿದ್ದಾರೆ. ವಿಪಕ್ಷ ನಾಯಕರಾಗಿ ಆರ್. ಅಶೋಕ್ ಆಯ್ಕೆಯಾಗಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ 28 ಸ್ಥಾನ ಗೆದ್ದು, ಮೋದಿ ಅವರಿಗೆ ಕೊಡುಗೆ ಕೊಡಬೇಕಿದೆ ಎಂದು ಹೇಳಿದರು.
ಉಡುಗುಣಿ, ತಾಳಗುಂದ, ಹೊಸೂರಿಗೆ 1.500 ಕೋಟಿ ರೂ. ಬಿಡುಗಡೆ ಮಾಡಿಸಿ ಕೆರೆ ತುಂಬಿಸಲಾಗಿದೆ. ನಿಮ್ಮೆಲ್ಲರ ಹಾಗೂ ಮೋದಿ, ಅಮಿತ್ ಷಾ ನಡ್ಡಾ ಅವರ ಆಶೀರ್ವಾದದಿಂದ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಜಯೇಂದ್ರ, ಅಶೋಕ ಅವರು ರಾಜ್ಯ ಪ್ರವಾಸ ಮಾಡಿ, ಬಿಜೆಪಿ ಮುಂದೆ ಯಾರು ಪೈಪೋಟಿ ನೀಡದಂತೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ರೈತ ನೆಮ್ಮದಿಯಿಂದ ಬದುಕದ ಹಾಗೆ ಕಾಂಗ್ರೆಸ್ ಪಕ್ಷದವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಇರುವಂತದ್ದಕ್ಕೆ ಕಲ್ಲು ಹಾಕಬೇಡಿ. ವಿಜಯೇಂದ್ರ ಅವರು ಪಕ್ಷವನ್ನು ಇನ್ನಷ್ಟು ಬಲಪಡಿಸಲಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ ಹಾಗೂ ನನ್ನದು ನಿಜವಾದ ಜೋಡೆತ್ತು: ಆರ್ ಅಶೋಕ್ ಮಾತನಾಡಿ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ಆರು ತಿಂಗಳಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ಆಗಿರಲಿಲ್ಲ. ಕಾಂಗ್ರೆಸ್ ಆಡಳಿತವನ್ನು ಹೋಗಲಾಡಿಸಲು ಜೋಡಿಬೇಕೆಂದು ನನ್ನನ್ನು ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದಾರೆ. ಹಿಂದೆ ಒಂದು ಜೋಡೆತ್ತುಗಳಿದ್ದವು. ಸಿದ್ದರಾಮಯ್ಯ ಹಾಗೂ ಡಿಕೆಶಿ. ಈಗ ಅಧಿಕಾರಕ್ಕೆ ಬಂದ ನಂತರ ಒಂದು ಎತ್ತು ನೀರಿಗೆಳೆದರೆ, ಇನ್ನೂಂದು ಏರಿಗೆ ಎಳೆಯುತ್ತಾ ಅಧಿಕಾರಕ್ಕಾಗಿ ಹೊಡೆದಾಡುತ್ತಿದ್ದಾರೆ ಎಂದರು.
ವಿಜಯೇಂದ್ರ ಹಾಗೆ ಏನೂ ಸುಮ್ಮನೆ ರಾಜ್ಯಾಧ್ಯಕ್ಷರಾಗಿ ಬಂದಿಲ್ಲ. ಅವರು ಯುವ ಮೋರ್ಚಾದಲ್ಲಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷರಾದ ಮೇಲೆ ಅಧ್ಯಕ್ಷರಾಗಬೇಕಲ್ಲವೆ?. ಅದೇ ರೀತಿ ವಿಜಯೇಂದ್ರ ನಮ್ಮ ಅಧ್ಯಕ್ಷರಾಗಿದ್ದಾರೆ. ನಾನು ಪ್ರವಾಸ ಮಾಡಿದ ಕಡೆ ಬಿಜೆಪಿಯ ಹವಾ ಇದೆ ಎಂದರು. ನನಗೆ ಟಿಕೆಟ್ ನೀಡಿದ್ದು ಯಡಿಯೂರಪ್ಪ ಅವರು. ಕೆಲವರು ನನಗೆ ಟಿಕೇಟ್ ನೀಡಬೇಡಿ ಎಂದಾಗ ಯಾರ ಮಾತನ್ನು ಕೇಳದೇ, ನನಗೆ ಟಿಕೇಟ್ ನೀಡಿ ಗೆಲ್ಲಿಸಿಕೊಂಡರು ಎಂದು ತಮ್ಮ ಹಾಗೂ ಯಡಿಯೂರಪ್ಪ ಸಂಬಂಧವನ್ನು ಮೆಲುಕು ಹಾಕಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದ ಕಥೆ ನೆನಪಿಸಿಕೊಂಡರು. ಕಾರ್ಯಕರ್ತರನ್ನು ಹೇಗೆ ನಡೆಸಿಕೊಳ್ಳಬೇಕೆಂದು ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕು. ಇಂದು ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಇದೆ ಎಂದರೆ ಅದು ಯಡಿಯೂರಪ್ಪ ಅವರಿಂದ ಎಂದರು. ಹೊಸ ಸರ್ಕಾರ ಬಂದು ಜನರಿಗೆ ಏನ್ ಮಾಡಿದೆ ಎಂದು ಪ್ರಶ್ನೆ ಮಾಡಿದರು. ಶಾಲೆ, ಆಸ್ಪತ್ರೆ, ರಸ್ತೆಗೆ ಹಣ ಬಿಡುಗಡೆ ಆಗಿಲ್ಲ. ಕಾಂಗ್ರೆಸ್ ಶಾಸಕರು ಒಂದು ವರ್ಷ ಏನೂ ಮಾಡಲು ಆಗುವುದಿಲ್ಲ ಎಂದರು. ಈಗ ಕರೆಂಟ್ ಖಾಲಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಪ್ರವಾಹ ಸಂದರ್ಭದಲ್ಲಿ ಡಬಲ್ ಹಣ ಬಿಡುಗಡೆ ಮಾಡಿದ್ದೆವು. ನಾವು ಒಂದೇ ತಿಂಗಳಲ್ಲಿ ಹಣ ಬಿಡುಗಡೆ ಮಾಡಿದ್ದೆವು. ನಿಮಗೆ ಏಕೆ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.