ಶಿವಮೊಗ್ಗ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಇಂದು ಶಿವಮೊಗ್ಗ ಗ್ರಾಮಾಂತರ ಬಿಜೆಪಿ ಘಟಕವು ನಗರದ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಸಂಸದ ಬಿ ವೈ ರಾಘವೇಂದ್ರ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ರೈಲ್ವೆ ನಿಲ್ದಾಣದ ರಸ್ತೆಯ ಕೆಇಬಿ ವೃತ್ತದಲ್ಲಿ ಇರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಉಚಿತ ಭಾಗ್ಯಗಳ ಹೆಸರಿನಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿ ಸಾಮಾನ್ಯ ಜನರ ಮೇಲೆ ಬರೆ ಹಾಕಲಾಗುತ್ತಿದೆ. ದರ ಏರಿಕೆ ಮಾಡಿರುವುದನ್ನು ಕಳೆದ ಎರಡು ತಿಂಗಳಿನಿಂದ ಸೇರಿಸಿ ಗ್ರಾಹಕರಿಗೆ ಹೊರೆಯನ್ನುಂಟು ಮಾಡಿದ್ದಾರೆ. ಇದು ರಾಜ್ಯ ಸರ್ಕಾರದ ಹಗಲು ದರೋಡೆ ನೀತಿಯಾಗಿದೆ. ಒಂದು ಕಡೆ ಉಚಿತ ಎಂದು ಹೇಳಿ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ಸರ್ಕಾರದ ವಿರುದ್ಧ ಜನ ದಂಗೆ ಏಳುತ್ತಾರೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹರಿಹಾಯ್ದರು.
ನಂತರ ಮಾಜಿ ಶಾಸಕ ಅಶೋಕ್ ನಾಯ್ಕ ಅವರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಕಚೇರಿ ಒಳ ಹೋಗಲು ಅವಕಾಶ ನೀಡಿ ಎಂದು ಪಟ್ಟು ಹಿಡಿದಾಗ ಪೊಲೀಸರು ಕೇವಲ ನಾಯಕರುಗಳು ಮಾತ್ರ ಒಳಗೆ ಹೋಗಿ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಭಟನಕಾರರು ಒಪ್ಪದೆ ಹೋದಾಗ ಪೊಲೀಸರು ಸಂಸದ ರಾಘವೇಂದ್ರ, ಮಾಜಿ ಶಾಸಕ ಅಶೋಕ ನಾಯ್ಕ ಸೇರಿದಂತೆ ಸುಮಾರು 50 ಜನರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.