ಶಿವಮೊಗ್ಗ: ಲೋಕಸಭೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಭರವಸೆಯಂತೆ ಎಲ್ಲರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಗರೀಬ್ ಕಲ್ಯಾಣ ಯೋಜನೆಯಡಿ 5 ಕೆ.ಜಿ ಅಕ್ಕಿ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ಭರವಸೆ ನೀಡಿದ್ದು 10 ಕೆಜಿ ಅಕ್ಕಿ, ಭರವಸೆಯಂತೆ ಕೇಂದ್ರದ 5 ಕೆ.ಜಿ ಹಾಗೂ ನೀವು ಹೇಳಿದ್ದ 10 ಕೆ.ಜಿ ಸೇರಿಸಿ ತಲಾ15 ಕೆ.ಜಿ ಅಕ್ಕಿ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ನವರು ಕೊಟ್ಟ ಭರವಸೆ ಈಡೇರಿಸಲಿ. ನಮ್ಮ ರಾಜ್ಯದಲ್ಲೇ ಸಾಕಷ್ಟು ಗೋಧಿ, ರಾಗಿ, ಅಕ್ಕಿ ಬೆಳೆಯುತ್ತಾರೆ. ಕಾಂಗ್ರೆಸ್ ನಾಯಕರಿಗೆ ಬೇರೆ ರಾಜ್ಯದ ಮೇಲೆ ಪ್ರೀತಿ ಜಾಸ್ತಿ. ನಮ್ಮ ರಾಜ್ಯದಲ್ಲಿ ಬೆಳೆಯುವ ಅಕ್ಕಿ ಖರೀದಿಸಿದರೆ ನಮ್ಮ ರೈತರಿಗೆ ಅನುಕೂಲ ಆಗುತ್ತದೆ. ನಮ್ಮ ರಾಜ್ಯದಲ್ಲಿ ಅಕ್ಕಿ ಸಿಗಲಿಲ್ಲ ಎಂದರೆ ಬೇರೆ ರಾಜ್ಯದಿಂದ ತೆಗೆದುಕೊಂಡು ಬನ್ನಿ. ಅತೀ ಶೀಘ್ರದಲ್ಲಿ ಕೊಟ್ಟಂತಹ ಭರವಸೆ ಈಡೇರಿಸಬೇಕು. ಹೀಗಾಗಿಯೇ ಅಧಿಕಾರಕ್ಕೆ ಬಂದಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕೊಟ್ಟ ಭರವಸೆ ಈಡೇರಿಸುತ್ತೇವೆ ಎಂದಿರುವ ಕಾಂಗ್ರೆಸ್ನವರು, ಬಳಿಕ ಈಡೇರಿಸಲು ಸಾಧ್ಯವಾಗದೇ ಇದ್ದಾಗ ಗೋಹತ್ಯೆ, ಪಠ್ಯ ಪರಿಷ್ಕರಣೆ ವಿಷಯ ತಂದು ಎಲ್ಲರನ್ನೂ ಡೈವರ್ಟ್ ಮಾಡುತ್ತಿದ್ದಾರೆ. ರಾಜ್ಯದ ಜನರಿಗೆ ತಪ್ಪು ಕಲ್ಪನೆ ಕೊಡುವುದರಲ್ಲಿ ಕಾಂಗ್ರೆಸ್ ಪಕ್ಷದವರು ನಿಸ್ಸೀಮರು ಎಂದು ಟೀಕಿಸಿದರು.