ಶಿವಮೊಗ್ಗ: ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜನರ ವಿಶ್ವಾಸ ಕಳೆದುಕೊಂಡಿದೆ. ಈಗಲೂ ಬಿಜೆಪಿ ಅದೇ ಪರಿಸ್ಥಿತಿಯಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ, ದೇವರು ಒಳ್ಳೆಯದು ಮಾಡಲಿ. ಬಿಜೆಪಿ ಕ್ಯಾಪ್ಟನ್ ಲೆಸ್ ಅಂತಾ ನಾನು ಹೇಳಿದ್ದು, ವಿಧಾನಸಭೆ ಒಳಗೆ ಯಾರು ಪ್ರಶ್ನೆ ಮಾಡುತ್ತಾರೆ. ಆ ಪಕ್ಷಕ್ಕೆ ಈಗಲೂ ವಿಪಕ್ಷ ನಾಯಕರು ಇಲ್ಲ. ಈಗ ಕ್ಯಾಪ್ಟನ್ ಮಾಡ್ತಾರಂತೆ ಹೇಳಿಕೊಂಡಿದ್ದಾರೆ. ಇಷ್ಟು ದಿನ ಯಾಕೆ ಮಾಡಲಿಲ್ಲ, ವಿಧಾನಸಭೆಯೊಳಗೆ ಪ್ರಶ್ನಿಸುವರು ಯಾರು ಎಂದು ಟೀಕಿಸಿದರು.
ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿಯವರು ಹೇಳ್ತಾರೆ. ಹಣೆಬರಹ ಬರೆಯುವ ಜನರು ತೀರ್ಮಾನ ಮಾಡೋದು, ಈ ಹಿಂದೆ ಸಹ ಬಹಳ ಅಧ್ಯಕ್ಷರು ಬಂದಿದ್ದಾರೆ. ಬಹಳ ಭಾಷಣ ಮಾಡಿದರೂ ಏನು ಆಗಿಲ್ಲ. ಜನ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಹೊಸ ಅಧ್ಯಕ್ಷರು ಬಂದ ತಕ್ಷಣ ಏನು ಆಗಲ್ಲ, ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು ಎಂದು ಟಾಂಗ್ ನೀಡಿದರು.
ವಿಜಯೇಂದ್ರ ವಿರುದ್ದ ಭ್ರಷ್ಟಾಚಾರ ಆರೋಪ: ವಿಜಯೇಂದ್ರ ವಿರುದ್ದ ಭ್ರಷ್ಟಾಚಾರದ ಆರೋಪ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದನ್ನು ನಾನೊಬ್ಬನೇ ತೀರ್ಮಾನ ಮಾಡಲು ಆಗಲ್ಲ, ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಜನರು ಸಹ ಯಾರು ಒಳ್ಳೆಯದು ಮಾಡ್ತಾರೆ ಅನ್ನೋದನ್ನ ನೋಡುತ್ತಾರೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಕೊಟ್ಟಿದೆ. ಜನರು ಈ ಎಲ್ಲಾ ಯೋಜನೆ ಬಗ್ಗೆ ಯೋಚನೆ ಮಾಡುತ್ತಾರೆ ಎಂದರು.