ಶಿವಮೊಗ್ಗ:ಬಿಜೆಪಿ ಸರ್ಕಾರದ ಜನ ಸಂಕಲ್ಪ ಯಾತ್ರೆಯು ಇಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಆನವಟ್ಟಿಯಲ್ಲಿ ನಡೆಯಿತು. ಯಾತ್ರೆಯ ಸಮಾವೇಶವನ್ನು ಆನವಟ್ಟಿ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಸಲಾಯಿತು. ಸಂಜೆ 6 ಕ್ಕೆ ಪ್ರಾರಂಭವಾದ ಜನಸಂಕಲ್ಪ ಯಾತ್ರೆಯನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ ದೀಪ ಬೆಳಗಿ ಚಾಲನೆ ನೀಡಿದರು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಕುಮಾರ ಬಂಗಾರಪ್ಪ ಅವರು ತಮ್ಮ ತಂದೆ ಬಂಗಾರಪ್ಪ ನೆನಪು ಮಾಡಿಕೊಳ್ಳುತ್ತಾ ಸೊರಬ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಜಿ ಸಿಎಂ ಯಡಿಯೂರಪ್ಪ ಸಾಕಷ್ಟು ಸಹಕರಿಸಿದ್ದಾರೆ. ಅದೇ ರೀತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮೂಡಿ, ಮೂಗುರು ಹಾಗೂ ಕಚವಿ ಏತಾ ನೀರಾವರಿ ಯೋಜನೆಗೆ ಸಹಕಾರಿಸಬೇಕು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕೆಂದು ಬಿತ್ತಳಿಕೆ ಪತ್ರವನ್ನು ಓದಿ ಸಿಎಂಗೆ ಸರ್ಮಪಿಸಿದರು.
ಸೊರಬದಲ್ಲಿ ಬಿಜೆಪಿ ಜನ ಸಂಕಲ್ಪ ಯಾತ್ರೆ ಇದೇ ವೇಳೆ ಸಿಎಂ ಬಸವರಾಜ ಬೊಮ್ಮಯಿ ಅವರು ಸೊರಬ ದಿಕ್ಸೂಚಿ ಎಂಬ ಆ್ಯಪ್ ಬಿಡುಗಡೆ ಮಾಡಿದರು. ನಂತರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಯ ಕಿರುಹೂತ್ತಿಗೆ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ನಾರಾಯಣ ಗೌಡ, ಬಸವರಾಜ್, ಗೃಹ ಸಚಿವ ಆರಗ ಜ್ಞಾನೇಂದ್ರ , ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಹಾಜರಿದ್ದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗೈರು:ಜನ ಸಂಕಲ್ಪ ಯಾತ್ರೆಯನ್ನು ಬಿಜೆಪಿ ಪಕ್ಷ ನಡೆಸುತ್ತಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಶಾಸಕರು ಬಾಗಿಯಾಗಿದ್ದರು. ಆದರೆ, ಮಾಜಿ ಸಚಿವ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್.ಈಶ್ವರಪ್ಪ ಗೈರು ಹಾಜರಾಗಿದ್ದರು. ಈಶ್ವರಪ್ಪಗೆ ಮಂತ್ರಿಸ್ಥಾನ ಸಿಗದ ಕಾರಣ ಕಾರ್ಯಕ್ರಮಕ್ಕೆ ಗೈರು ಆಗಿದ್ದಾರೆ ಎಂಬ ಮಾತು ಕೇಳಿ ಬಂತು.
ಇದನ್ನೂ ಓದಿ:ಜನ ಸಂಕಲ್ಪ ಯಾತ್ರೆಗೆ ಸಕಲ ಸಿದ್ಧತೆ: ಶಾಸಕ ಕುಮಾರ್ ಬಂಗಾರಪ್ಪ