ಶಿವಮೊಗ್ಗ:ಸಾಗರ ನಗರಸಭೆಯ ಅಧ್ಯಕ್ಷರಾಗಿ ಮಧುರಾ ಶಿವಾನಂದ್ ಹಾಗೂ ಉಪಾಧ್ಯಕ್ಷರಾಗಿ ವಿ.ಮಹೇಶ್ ಆಯ್ಕೆಯಾಗಿದ್ದಾರೆ. ಈ ಮೂಲಕ ಸಾಗರ ನಗರಸಭೆಯಲ್ಲಿ ಬಿಜೆಪಿ 8 ವರ್ಷಗಳ ನಂತರ ಅಧಿಕಾರದ ಗದ್ದುಗೆ ಹಿಡಿದಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ)ಗೆ ಮೀಸಲಾಗಿತ್ತು. ನಗರಸಭೆಯ 31 ಸ್ಥಾನದಲ್ಲಿ ಬಿಜೆಪಿ- 16 ಸ್ಥಾನ, ಕಾಂಗ್ರೆಸ್-09, ಜೆಡಿಎಸ್-01 ಹಾಗೂ ಪಕ್ಷೇತರರು-05 ಸ್ಥಾನಗಳನ್ನು ಪಡೆದಿದ್ದರು.
ಬಿಜೆಪಿ ಸದಸ್ಯರನ್ನು ಆಪರೇಷನ್ ಮೂಲಕ ತನ್ನೆಡೆ ಸೆಳೆಯುವ ಕಾಂಗ್ರೆಸ್ ನಿರ್ಧಾರ ತಿಳಿದ ಶಾಸಕ ಹರತಾಳ್ ಹಾಲಪ್ಪ ಎಲ್ಲಾ ಬಿಜೆಪಿ ಸದಸ್ಯರಿಗೆ ಜೋಗದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ, ನಂತರ ಅವರನ್ನು ಸಾಗರಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ಬೆಳಗ್ಗೆ ತಮ್ಮೊಂದಿಗೆ ಕರೆತಂದು ನಾಮಪತ್ರ ಸಲ್ಲಿಕೆ ಮಾಡಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಉಪವಿಭಾಗಾಧಿಕಾರಿಯವರು ಮಧ್ಯಾಹ್ನ ಫಲಿತಾಂಶ ಘೋಷಣೆ ಮಾಡಿದರು. ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪಕ್ಷೇತರು ಮತ ಚಲಾಯಿಸಿದ್ದರಿಂದ ಒಟ್ಟು 21 ಮತಗಳು ಲಭಿಸಿವೆ. ಕಾಂಗ್ರೆಸ್ ಗೆ ತಲಾ 9 ಮತಗಳು ಬಿದ್ದಿವೆ. ಉಳಿದಂತೆ ಜೆಡಿಎಸ್ ಅಭ್ಯರ್ಥಿ ತಟಸ್ಥವಾಗಿ ಮತ ಚಲಾಯಿಸದೆ ಉಳಿದುಕೊಂಡಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಮಧುರ ಶಿವಾನಂದ್ ಹಾಗೂ ಮಹೇಶ್ ಆಯ್ಕೆಯಾಗುತ್ತಿದ್ದಂತೆಯೇ ಶಾಸಕ ಹರತಾಳ್ ಹಾಲಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.