ಶಿವಮೊಗ್ಗ : ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿದರು.
ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗವನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸಹಕರಿಸಬೇಕು. ಇನ್ನು ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ ವಿಮಾನ ಹಾರಾಡಲಿದೆ. ಇದರಿಂದಾಗಿ ಕೈಗಾರಿಕೆಗಳು ಬೆಳೆಯುವ ಮೂಲಕ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿದೆ ಎಂದರು.
ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವಂತೆ ಎಲ್ಲರೂ ಶ್ರಮಿಸಬೇಕು. ಬಜೆಟ್ ನಲ್ಲಿ ಜಿಲ್ಲೆಗೆ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ನೀಡಿ ಎಂದು ಕೇಳಿದ್ದಾರೆ. ಆರ್ಥಿಕ ಇತಿಮಿತಿಯಲ್ಲಿ ಜಿಲ್ಲೆಗೆ ಅಭಿವೃದ್ಧಿ ಅನುದಾನ ನೀಡುತ್ತೇನೆ ಎಂದರು.
ಓದಿ : ರಾಮ ಮಂದಿರ ದೇಣಿಗೆ ವಿಚಾರದಲ್ಲಿ ಅನಗತ್ಯ ವಿರೋಧ ಶೋಭೆ ತರುವುದಿಲ್ಲ: ಸಿಎಂ ಬಿಎಸ್ವೈ
ನಂತರದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿದ್ದಾಗ ಗೋಹತ್ಯೆ ಮಾಡುವವರನ್ನು ಹಾಗೂ ಕಳ್ಳರನ್ನು ಬಂಧಿಸದೇ ಗೋ ರಕ್ಷಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಗೋ ಹತ್ಯೆಯ ಶಾಪವೇ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು. ರಾಮ ಮಂದಿರ ದೇಣಿಗೆ ವಿಚಾರವಾಗಿ ಇಬ್ಬರೂ ಮಾಜಿ ಸಿಎಂಗಳು ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರು ದೇಣಿಗೆ ನೀಡದವರ ಮನೆಗೆ ಗುರುತು ಮಾಡಲಾಗುತ್ತಿದೆ ಎಂದರೆ, ಸಿದ್ದರಾಮಯ್ಯ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ದೇಣಿಗೆ ನೀಡಲ್ಲ, ಬೇರೆ ಕಡೆ ಕಟ್ಟಿದರೆ ದೇಣಿಗೆ ನೀಡುತ್ತೇನೆ ಎಂದಿದ್ದಾರೆ. ಇಡೀ ಕರ್ನಾಟಕದಲ್ಲಿ ದುಡ್ಡು ಕೊಡಲ್ಲ ಎಂದಿರುವ ವ್ಯಕ್ತಿಯೆಂದರೆ, ಅದು ಸಿದ್ದರಾಮಯ್ಯ ಮಾತ್ರ. ಹಾಗಾಗಿ ಅವರ ಮನೆಯನ್ನು ಮಾರ್ಕ್ ಮಾಡಬೇಕು ಎಂದು ಹೇಳಿದರು.
ಭಾರತೀಯ ಜನತಾ ಪಾರ್ಟಿ ಸೈದ್ಧಾಂತಿಕವಾಗಿ, ವೈಚಾರಿಕವಾಗಿ ಹಳ್ಳಿ ಮಟ್ಟದಿಂದ ಬೆಳೆಯುತ್ತಿದೆ. ಹಾಗಾಗಿ, ಮುಂಬರುವ ತಾಲೂಕು ಪಂಚಾಯತ್ , ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ಪಷ್ಟ ಬಹುಮತ ಸಿಗುವ ಮೂಲಕ ಗೆಲವು ಸಾಧಿಸಬೇಕಿದೆ. ಈಗ ನಮ್ಮ ಸಂಘಟನೆಯ ಶಕ್ತಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಲ್ಲೂ ಇಲ್ಲ ಎಂದು ಟೀಕಿಸಿದರು.