ಶಿವಮೊಗ್ಗ: ಬಿಜೆಪಿಗೆ ಯಾರೇ ಬಂದರೂ ಸರಿ. ಅವರು ಬಿಜೆಪಿಯ ನಾಯಕತ್ವ, ತತ್ವ- ಸಿದ್ದಾಂತ, ವಿಚಾರಗಳಿಗೆ ತಕ್ಕಂತೆ ನಡೆಯಬೇಕು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕರುಗಳಿಗೆ ಬಹಿರಂಗ ಸಭೆಯಲ್ಲೇ ಟಾಂಗ್ ನೀಡಿದ್ದಾರೆ.
ಬಿಜೆಪಿಗೆ ಬಂದ ನೂತನ ಶಾಸಕರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕು: ವಲಸಿಗರಿಗೆ ಈಶ್ವರಪ್ಪ ಟಾಂಗ್ - ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ
ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಬಂದಿರುವ ಶಾಸಕರು ಬಿಜೆಪಿ ವಿಚಾರ, ಸಿದ್ಧಾಂತ, ನಾಯಕತ್ವವನ್ನು ಒಪ್ಪಿ ನಡೆಯಬೇಕು ಎಂದು ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದ ಶುಭ ಮಂಗಳ ಸಮುದಾಯ ಭವನದಲ್ಲಿ ಬಿಜೆಪಿಯ ಜಿಲ್ಲಾ ಸಮಿತಿ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ನೂತನ ಶಾಸಕರು ಬಿಜೆಪಿಯ ತತ್ವ- ಸಿದ್ದಾಂತಗಳಿಗೆ ಹೊಂದಿಕೊಂಡು ನಡೆಯಬೇಕು. ನಾವು ಪಕ್ಷವನ್ನು ತಾಯಿಯಂತೆ ಕಾಣುತ್ತೇವೆ. ಇದರಿಂದ ಪಕ್ಷಕ್ಕೆ ದ್ರೋಹ ಮಾಡಿದರೆ, ತಾಯಿಗೆ ದ್ರೋಹ ಮಾಡಿದಂತೆ ಆಗುತ್ತದೆ ಎಂದರು.
ಕಾಂಗ್ರೆಸ್‌ನಿಂದ ಬಂದ ನೂತನ ಶಾಸಕರೊಬ್ಬರು ನಮ್ಮ ಪಕ್ಷ ಬೇರೆ ಇರಬಹುದು, ಆದ್ರೆ ನಮ್ಮ ನಾಯಕ ಸಿದ್ದರಾಮಯ್ಯ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆಗೆ ಟಾಂಗ್ ನೀಡಿದ ಸಚಿವ ಈಶ್ವರಪ್ಪ ನೂತನ ಶಾಸಕರಿಗೆ ಬಹಿರಂಗ ಸಭೆಯಲ್ಲಿ ನೀತಿ ಪಾಠ ಮಾಡಿದ್ದಾರೆ. ನಾವು ಪಕ್ಷವನ್ನು ತಾಯಿಯಂತೆ ನೋಡುತ್ತೇವೆ. ಪಕ್ಷದ ನಾಯಕರೇ ನಮ್ಮ ನಾಯಕರು. ಪಕ್ಷ ಹೇಳಿದಂತೆ ನಡೆಯಬೇಕು. ಮನೆ ಬದಲಾಗಿದೆ. ಅದೇ ರೀತಿ ಸಿದ್ದಾಂತವು ಬದಲಾಗಬೇಕು ಎಂದರು.