ಶಿವಮೊಗ್ಗ: ಬಿಜೆಪಿಯ ಭದ್ರಕೋಟೆ ಶಿವಮೊಗ್ಗ ಜಿಲ್ಲೆಯಲ್ಲಿ 25 ವರ್ಷಗಳ ನಂತರ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ನಡೆದಿದೆ. ನಗರದ ಹೊರ ವಲಯದ ಹರ್ಷ ದ ಫರ್ನ್ ಹೋಟೆಲ್ನಲ್ಲಿ ಸಭೆ ನಡೆಸಲಾಯಿತು.
ಸಭೆಯು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಿಎಸ್ವೈ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಡಿಸಿಎಂ ಗೋವಿಂದ್ ಕಾರಜೋಳ, ಕೇಂದ್ರ ಸಚಿವರಾದ ಡಿ.ವಿ.ಸದಾನಂದ ಗೌಡ, ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಜಗದೀಶ್ ಶೆಟ್ಟರ್ ಭಾಗಿಯಾಗಿದ್ದರು.
ಇದನ್ನೂ ಓದಿ:ಎಲ್ಲಾ ಹಂತಗಳಲ್ಲಿ ಪಕ್ಷ ಬಲಪಡಿಸಲು ಜೆಡಿಎಸ್ ಸಿದ್ದತೆ : ಸಕ್ರಿಯ ರಾಜಕಾರಣಕ್ಕೆ ನಿಖಿಲ್ ಕುಮಾರಸ್ವಾಮಿ?
ಭಾನುವಾರ ರಾಜ್ಯ ಬಿಜೆಪಿಯ ವಿಶೇಷ ಸಭೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ರಾಜ್ಯ ರಾಜಕೀಯದ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ. ಸಚಿವ ಸಂಪುಟ ವಿಸ್ತರಣೆ, ಸಚಿವರ ಕಾರ್ಯವೈಖರಿ, ಗ್ರಾಮ ಪಂಚಾಯತ್ ಚುನಾವಣೆಯ ದಿಗ್ವಿಜಯ, ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯ ತಯಾರಿ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಸಭೆಯ ಕುರಿತು ಯಾವುದೇ ನಾಯಕರೂ ಕೂಡಾ ಪ್ರತಿಕ್ರಿಯೆ ನೀಡಿಲ್ಲ. ಈ ಕುರಿತು ಭಾನುವಾರ ನಡೆಯುವ ವಿಶೇಷ ಸಭೆಯ ನಂತರ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ.
ಭಾನುವಾರ ಬೆಳಗ್ಗೆ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ ಒಡೆತನದ ಪೆಸೆಟ್ ಕಾಲೇಜಿನಲ್ಲಿ ರಾಜ್ಯದ ಪ್ರಮುಖ 250 ಜನರ ವಿಶೇಷ ಸಭೆ ನಡೆಯಲಿದೆ. ಇದರ ಉದ್ಘಾಟನೆಯನ್ನು ಸಿಎಂ ಯಡಿಯೂರಪ್ಪ ಮಾಡಲಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಹಿನ್ನೆಲೆಯಲ್ಲಿ ಸಿಎಂಗೆ ಸನ್ಮಾನ ನಡೆಯಲಿದೆ.