ಶಿವಮೊಗ್ಗ: ನಾನು ಈ ಬಾರಿ 24 ಸಾವಿರ ಮತಗಳ ಅಂತರದಿಂದ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿ ಸಾಗರದ ಶಾಸಕ ಹಾಲಪ್ಪ ಹರತಾಳು ತಿಳಿಸಿದ್ದಾರೆ.
ಸಾಗರ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸಾಗರ ಪಟ್ಟಣದ ಉಪವಿಭಾಗಧಿಕಾರಿಗಳ ಕಚೇರಿಯಲ್ಲಿ ತಮ್ಮ ಪತ್ನಿ ಯಶೋಧ ಹಾಲಪ್ಪ, ಕಾಗೋಡು ತಿಮ್ಮಪ್ಪನವರ ಪುತ್ರಿ ಡಾ.ರಾಜನಂದಿನಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹಾಗೂ ರಾಜೇಶ್ ಕೀಳಂಬಿ ಅವರ ಜತೆ ಸೇರಿ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರ ಜತೆಗೆ ಅವರು ಮಾತನಾಡಿದರು.
ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪನವರ ನಾಯಕತ್ವದಲ್ಲಿ ಬಿಜೆಪಿ ಬೆಳೆಯುತ್ತಿದೆ. ಬಿಜೆಪಿ ಪ್ರಪಂಚದಲ್ಲಿ ಅತಿ ದೊಡ್ಡ ರಾಜಕೀಯ ಪಕ್ಷ. ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವುದು ನನಗೆ ಖುಷಿ ತಂದಿದೆ. ನಾನು ಈ ಪಕ್ಷದ ಕಾರ್ಯಕರ್ತ ಎಂಬ ಹೆಮ್ಮೆಯೂ ಇದೆ. ನನಗೆ ಮತ್ತೊಮ್ಮೆ ಅವಕಾಶ ಕೊಟ್ಟಿದ್ದಕ್ಜೆ ಧನ್ಯವಾದಗಳು ಎಂದು ಹೇಳಿದರು.
ರೈತರ ಸಮಸ್ಯೆ ಬಗೆಹರಿಸುವೆ:ಸಾಗರ ಕ್ಷೇತ್ರದಲ್ಲಿ ಒಳ್ಳೆಯ ಆಡಳಿತ,ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿಯನ್ನೂ ಮುಂದುವರಿಸುತ್ತೇವೆ. ಬಿಜೆಪಿ ಅಭ್ಯರ್ಥಿಯನ್ನೂ ಬೆಂಬಲಿಸಿ, ಆಶೀರ್ವಾದ ಮಾಡಿ. ಮೋದಿಯವರ ನಾಯಕತ್ವ, ಯಡಿಯೂಪ್ಪನವರ ನಾಯಕತ್ವ ಬಲಪಡಿಸಿ ಮತ್ತು ಬಿಜೆಪಿ ಬೆಂಬಲಿಸುವಂತೆ ಜನರ ಬಳಿ ಹೋಗುತ್ತಿದ್ದೇನೆ. ಮಲೆನಾಡಿನ ರೈತರ ಸಮಸ್ಯೆ ಇದೆ. ಶರಾವತಿ ಮುಳುಗಡೆ ರೈತರ ಸಮಸ್ಯೆ, ಬಗರ್ ಹುಕುಂ ಅರಣ್ಯ ಹಕ್ಕು ಕಾಯ್ದೆ, ಗೋಮಾಳ, ಅರಣ್ಯ ಸಾಗುವಳಿ ಹೀಗೆ ರೈತರ ಸಮಸ್ಯೆಗಳು ಇವೆ. ಮತ್ತೊಮ್ಮೆ ಊಳುವವನೆ ಹೊಲದೊಡೆಯ ಎಂದು ವಿಧಾನಸಭೆಯಲ್ಲಿ ಜನರ ಪರವಾಗಿ ಧ್ವನಿ ಎತ್ತುತ್ತೇನೆ ಎಂದು ಹೇಳಿದರು.