ಶಿವಮೊಗ್ಗ:ಜಗತ್ತಿನಲ್ಲಿ ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸುವ ಆಶಯ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳಿಂದ ಈಡೇರಿದಂತಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸೊರಬ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಒಂದು ವರ್ಷದ ಸಾಧನೆಗಳ ಮಾಹಿತಿ ಕೋಶವನ್ನು ಮನೆಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು. ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕೊರೊನಾದಂತಹ ಸಂಕಷ್ಟಗಳನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದರು.
ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದ ದೇಶವನ್ನು ಸುರಕ್ಷಿತವಾಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು, ಜನತೆಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ, ’ಆತ್ಮ ನಿರ್ಭರ ಭಾರತ’ದ ಚಿಂತನೆಗಳು ದೇಶವನ್ನು ಸಂಕಷ್ಟದಿಂದ ದೂರಮಾಡಬಲ್ಲವು ಎಂಬ ವಿಶ್ವಾಸವಿದೆ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಪ್ರಧಾನಮಂತ್ರಿ ಮೋದಿ ಸ್ವಾವಲಂಬಿ ಭಾರತವನ್ನು ಕಟ್ಟುತ್ತಿದ್ದಾರೆ: ಶಾಸಕ ಕುಮಾರ ಬಂಗಾರಪ್ಪ - ಶಾಸಕ ಕುಮಾರ್ ಬಂಗಾರಪ್ಪ
ಸ್ವಾವಲಂಬಿ ಭಾರತ ನಿರ್ಮಾಣವು ಕೇಂದ್ರ ಸರ್ಕಾರದ ಯೋಜನೆಗಳಿಂದ ಈಡೇರಿದಂತಾಗಿದೆ. ಪ್ರಧಾನಮಂತ್ರಿ ಮೋದಿಯವರ ಸಮರ್ಥ ಸಾರಥ್ಯದಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಮೋದಿ ಅವರ ಕರೆಗೆ ಓಗೊಟ್ಟು ಜನತೆ ಲಾಕ್‌ಡೌನ್ ಸಂದರ್ಭದಲ್ಲಿ ಎದೆಗುಂದದೆ ಸಮಸ್ಯೆಗಳನ್ನು ಮೆಟ್ಟಿ ನಿಂತರು. ವೈದ್ಯಕೀಯ ಕ್ಷೇತ್ರ ಅತ್ಯಂತ ಮುಂದುವರೆದಿದ್ದು, ಕೋವಿಡ್19 ಕ್ಕೆ ಶೀಘ್ರದಲ್ಲಿ ಔಷಧ ಕಂಡುಹಿಡಿಯವ ಭರವಸೆ ಇದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಭಿವೃದ್ಧಿಗೆ ಸಾಕಷ್ಟು ಒತ್ತನ್ನು ನೀಡುತ್ತಿವೆ. ಬಡವರು, ರೈತರು, ಸಣ್ಣ ಕೈಗಾರಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆರ್ಥಿಕವಾಗಿ ಬಲ ತುಂಬಲು ಕೇಂದ್ರ ಸರ್ಕಾರ 21 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ. ರಾಜ್ಯದಲ್ಲಿಯೂ ಅಭಿವೃದ್ಧಿಗಳ ಪರ್ವ ನಡೆಯುತ್ತಿದೆ. ಅಲ್ಲದೆ ತಾಲೂಕಿನಲ್ಲಿಯೂ ನೀರಾವರಿ ಯೋಜನೆಗಳು, ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕರು ಇದೇ ವೇಳೆ ಮಾಹಿತಿ ನೀಡಿದರು.