ಶಿವಮೊಗ್ಗ: ರಾಜ್ಯದ ಬಿಲ್ಲವ, ಈಡಿಗ ಹಾಗೂ ನಾಮಧಾರಿ ಸಮಾಜದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜನವರಿ 6 ರಿಂದ ಮಂಗಳೂರಿನಿಂದ ಬೆಂಗಳೂರು ತನಕ 658 ಕಿಮಿ ದೂರದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರ್ಗಿ ಜಿಲ್ಲೆ ಚಿತ್ತಾಪುರದ ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೀಠಾಧಿಪತಿಗಳಾದ ಪ್ರಣವಾನಂದ ಸ್ವಾಮೀಜಿಗಳು ತಿಳಿಸಿದ್ದಾರೆ.
ಇಂದು ಜಿಲ್ಲಾ ಆರ್ಯ ಈಡಿಗ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 6 ರಂದು ಮಂಗಳೂರಿನಿಂದ ಪಾದಯಾತ್ರೆ ಪ್ರಾರಂಭವಾಗಿ, ಉಡುಪಿ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆಯ ಮೂಲಕ ಚಿತ್ರದುರ್ಗ ಜಿಲ್ಲೆಯಿಂದ ಬೆಂಗಳೂರಿಗೆ ತಲುಪಲಾಗುವುದು. ಇದು ಸುಮಾರು 40 ದಿನಗಳ ಪಾದಯಾತ್ರೆಯಾಗಿದೆ.
ಈ ಪಾದಯಾತ್ರೆ ನಮ್ಮ ಸಮಾಜದ ವಿವಿಧ ಬೇಡಿಕೆಗಳ ಈಡೇರಿಗಾಗಿ ಮಾಡಲಾಗುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ ಮಾಡಿ 500 ಕೋಟಿ ಮೀಸಲಿಡಬೇಕು. ನಮ್ಮ ಕುಲಕಸುಬಾದ ಸೇಂದಿ ಇಳಿಸಿ ಮಾರಾಟಕ್ಕೆ ಅನುಮತಿ ನೀಡಬೇಕು. ಸಿಗಂದೂರು ದೇವಾಲಯದ ಮೇಲೆ ಸರ್ಕಾರ ದೌರ್ಜನ್ಯ ನಿಲ್ಲಿಸಬೇಕು.
ನಮ್ಮ ಸಮಾಜ ಹೆಚ್ಚು ಇರುವ ಕಡೆ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ನಾರಾಯಣ ಗುರುಗಳ ಮೂರ್ತಿ ಸ್ಥಾಪಿಸಬೇಕು. 2ಎ ನಲ್ಲಿರುವ ನಮ್ಮ ಸಮಾಜಕ್ಕೆ ಇತರೆ ಸಮಾಜದವರ ಸೇರ್ಪಡೆಯಿಂದ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರಿ ಗೋಮಾಳ ಜಮೀನಿನಲ್ಲಿ ಸರ್ಕಾರಿ ವೆಚ್ಚದಲ್ಲಿ ಈಚಲು, ತೆಂಗಿನಮರ ನೆಡಬೇಕು ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಾದಯಾತ್ರೆ ನಡೆಸುತ್ತಿದ್ದೇವೆ ಎಂದರು.
ಪ್ರಣವಾನಂದ ಸ್ವಾಮೀಜಿ ಪ್ರತಿಕ್ರಿಯೆ ನಮ್ಮ ಸಮಾಜವನ್ನು ತುಳಿಯಬೇಕು ಎಂದು ದೇವರಾಜ ಅರಸರು ಸೇಂದಿ ಮಾರಾಟ ರದ್ದು ಮಾಡಿದರು. ಇದರಿಂದ ನಮ್ಮ ಕುಲಕಸುಬು ಇಲ್ಲದಂತಾಗಿದೆ. ನಮ್ಮ ಸಮುದಾಯದ ಜನಪ್ರತಿನಿಧಿಗಳು ನಮ್ಮ ಸಮಾಜಕ್ಕೆ ಏನೂ ಮಾಡಿಲ್ಲ. ನಾರಾಯಣ ಗುರು ಅಭಿವೃದ್ದಿ ಕೋಶ ರಚನೆ ಮಾಡುವುದರ ಬದಲು ಅಭಿವೃದ್ದಿ ನಿಗಮ ಮಾಡಬೇಕೆಂದು ಆಗ್ರಹಿಸಿದರು. ಫೆಬ್ರವರಿ 14 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಮ್ಮ ಧರಣಿ ನಿರಂತರವಾಗಿ ನಮ್ಮ ಬೇಡಿಕೆಗಳ ಈಡೆರಿಕೆಗಾಗಿ ನಡೆಯತ್ತದೆ ಎಂದು ತಿಳಿಸಿದರು. ಈ ವೇಳೆ ಸಮಾಜದ ಮುಖಂಡರು ಹಾಜರಿದ್ದರು.
ಇದನ್ನೂ ಓದಿ:ಮತದಾರರ ಮಾಹಿತಿ ಅಕ್ರಮ ಸಂಗ್ರಹ ಆರೋಪ.. ಕೇಂದ್ರ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ದೂರು