ಶಿವಮೊಗ್ಗ: ಭದ್ರಾ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಭದ್ರಾವತಿಯ ಹೊಸ ಸೇತುವೆ ಮತ್ತೆ ಮುಳುಗಡೆಯಾಗಿದೆ. ಭದ್ರಾ ನದಿಗೆ ಹೆಚ್ಚಿನ ನೀರು ಬಿಟ್ಟಿರುವುದರಿಂದ ಇಲ್ಲಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಮುಳುಗಡೆಯಾಗಿದೆ. ಸದ್ಯ ಸೇತುವೆ ಮೇಲೆ ಪ್ರವಾಹದ ನೀರು ಹರಿಯುತ್ತಿರುವುದರಿಂದ ಸಂಚಾರ ಸ್ಥಗಿತಗೊಂಡಿದೆ.
ಹಾಲಿ ಭದ್ರಾ ಅಣೆಕಟ್ಟೆಯಿಂದ ಸುಮಾರು 55 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದ್ದು, ಇದರಿಂದಾಗಿ ಅಕ್ಕಪಕ್ಕದ ಪ್ರದೇಶಗಳು ಜಲಾವೃತವಾಗಿದೆ. ಅಲ್ಲದೇ ಕವಲಗುಂದಿ, ಏನಾಕ್ಷಿ ಬಡಾವಣೆ, ಬಿಹೆಚ್ ರಸ್ತೆ ಪಕ್ಕದ ಅಂಬೇಡ್ಕರ್ ನಗರದಲ್ಲಿ ಹಾಗೂ ಗುಂಡಪ್ಪ ಬಡಾವಣೆಗೆ ನೀರು ನುಗ್ಗಿದೆ. ಇದರಿಂದ ನಿನ್ನೆ ರಾತ್ರಿಯೇ ಕವಲಗುಂದಿ ಹಾಗೂ ಏನಾಕ್ಷಿ ಬಡಾವಣೆಯ ಜನರನ್ನು ಕಾಳಜಿ ಕೇಂದ್ರಗಳಿಗೆ ರವಾನೆ ಮಾಡಲಾಗಿದೆ.