ಶಿವಮೊಗ್ಗ:ಏ. 27 ರಂದು ನಡೆಯುವ ಭದ್ರಾವತಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಇಂದು ಘೋಷಣೆ ಮಾಡಿದರು.
ನಗಸರಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಭದ್ರಾವತಿ ನಗರಸಭೆ ಚುನಾವಣೆ ಏ.27 ರಂದು ನಡೆಯಲಿದೆ. ಹಾಗಾಗಿ 35 ವಾರ್ಡ್ಗಳ ಪೈಕಿ ಮೊದಲ ಹಂತದಲ್ಲಿ 21 ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಹೆಸರುಗಳನ್ನು ಘೋಷಣೆ ಮಾಡಲಾಗುತ್ತಿದೆ. ಇನ್ನುಳಿದ 14 ವಾರ್ಡ್ಗಳ ಅಭ್ಯರ್ಥಿಗಳ ಹೆಸರನ್ನು ಮುಂದಿನ ನಾಲ್ಕೈದು ದಿನಗಳಲ್ಲಿ ಅಂತಿಮಗೊಳಿಸಿ ಘೋಷಣೆ ಮಾಡಲಾಗುತ್ತದೆ ಎಂದರು.
ಕಳೆದ ಬಾರಿ ಭದ್ರಾವತಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಕ್ಷದಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸಿದ ಕಾರ್ಯಕರ್ತರನ್ನು ಹಾಗೂ ಬೇರೆ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಗೊಂಡ ಪಕ್ಷದ ನಾಯಕರುಗಳಿಗೆ ಚುನಾವಣೆಯಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ, ಸಭೆ- ಸಮಾರಂಭಗಳನ್ನು ಮಾಡದೆ ಮನೆ, ಮನೆ ಪ್ರಚಾರ ಮಾಡುವ ಮೂಲಕ ಮತವನ್ನು ಕೇಳುತ್ತೇವೆ. ಜಿಲ್ಲೆಯ ಆರು ಜನ ಶಾಸಕರು, ಸಂಸದರು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಭದ್ರಾವತಿ ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.