ಶಿವಮೊಗ್ಗ:ಭದ್ರಾವತಿ ವಿಧಾನಸಭೆ ಕ್ಷೇತ್ರ ಜಿಲ್ಲೆಯ ಇತರ ಕ್ಷೇತ್ರಗಳಿಕ್ಕಿಂತ ವಿಭಿನ್ನ ಮತ್ತು ವಿಶೇಷ ಉಳ್ಳದ್ದು. ಕ್ಷೇತ್ರದಲ್ಲಿ ಪಕ್ಷಗಳು ನಗಣ್ಯ, ಇಲ್ಲಿ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ. ಕಳೆದ ಎರಡು ದಶಕಗಳಿಂದ ಕ್ಷೇತ್ರದಲ್ಲಿ ಇಬ್ಬರೇ ನಾಯಕರುಗಳು ಎದುರಾಳಿಗಳಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕ್ಷೇತ್ರದ ಹಿಡಿತ ಸಾಧಿಸುವಲ್ಲಿ ಯಶ ಕಂಡಿದ್ದು, ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಈ ಕ್ಷೇತ್ರವನ್ನು ತಮಿಳುನಾಡು ರಾಜ್ಯಕ್ಕೆ ಹೋಲಿಸುವುದುಂಟು. ಅದಕ್ಕೆ ಬಲವಾದ ಕಾರಣವೂ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ತಮಿಳುನಾಡಿನಲ್ಲಿ ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಮಾತ್ರ ಎದುರಾಳಿಗಳಾಗುತ್ತವೆ ಹಾಗೂ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ. ಅದೇ ರೀತಿ ಭದ್ರಾವತಿಯಲ್ಲಿ ಕಳೆದ ಎರಡು ದಶಕಗಳಿಂದ ಜೆಡಿಎಸ್ನ ಅಪ್ಪಾಜಿಗೌಡ ಹಾಗೂ ಕಾಂಗ್ರೆಸ್ನ ಸಂಗಮೇಶ್ ನಡುವೆ ಸ್ಪರ್ಧೆ ನಡೆಯುತ್ತಲೇ ಇದೆ. ಕ್ಷೇತ್ರವು ಭದ್ರಾವತಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟು 2,10,212 ಮತದಾರರಿದ್ದು ಇದರಲ್ಲಿ ಮಹಿಳೆಯರು 1,07,971 ಮತ್ತು ಪುರುಷರು 1,02,236 ಜನ ಮತದಾರರು ಇದ್ದಾರೆ.
ಕ್ಷೇತ್ರ ಗಮನ ಸೆಳೆದಿರುವುದು ಇಲ್ಲಿನ ಎರಡು ಪ್ರಮುಖ ಕಾರ್ಖಾನೆಗಳಿಂದ. ಒಂದು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಇನ್ನೂಂದು ಮೈಸೂರು ಪೇಪರ್ ಮಿಲ್. ಈಗಾಗಲೇ ಮೈಸೂರು ಪೇಪರ್ ಮಿಲ್ ಕಾರ್ಖಾನೆ ಬಾಗಿಲು ಹಾಕಲಾಗಿದೆ. ಈಗ ವಿಐಎಸ್ಎಲ್ ಕಾರ್ಖಾನೆಯು ತನ್ನ ಉಳಿಯುವಿಕೆಯ ಹೋರಾಟಕ್ಕೆ ನಿಂತಿದೆ. ಎರಡು ಕಾರ್ಖಾನೆಯ ಉಳಿವಿಕೆಗಾಗಿ ಕಾರ್ಮಿಕರು ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದ್ದಾರೆ.
ಎರಡು ಕಾರ್ಖಾನೆಯ ಕಾರ್ಮಿಕರು ಇಲ್ಲಿನ ಪ್ರಮುಖ ಮತದಾರರು. ಒಂದು ಕಾರ್ಖಾನೆ ಮುಚ್ಚಿರುವ ಕಾರಣ ಮತದಾರರು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಕೈಗಾರಿಕ ಕ್ಷೇತ್ರವಾದರೂ ಸಹ ಇಲ್ಲಿ ಅಭಿವೃದ್ಧಿ ಅಷ್ಟು ಹೇಳಿಕೊಳ್ಳುವಂತಿಲ್ಲ. ಕ್ಷೇತ್ರವು ನೀರಾವರಿ ಪ್ರದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ ಎನ್ನಬಹುದು. ಪಟ್ಟಣದ ಭಾಗದಲ್ಲಿ ರಸ್ತೆ, ಒಳಚರಂಡಿ ಹಾಗೂ ನೆರೆ ಸಮಸ್ಯೆ ಸಾಕಷ್ಟು ಇದೆ.
ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶವನ್ನು 1999ರಲ್ಲಿ ಮಾಡಿದರು. ಅಂದು ಮಾಜಿ ಶಾಸಕ ದಿವಂಗತ ಅಪ್ಪಾಜಿಗೌಡರ ವಿರುದ್ಧ 7,386 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ನಂತರ 2004 ರಲ್ಲಿ ಶಾಸಕರಾಗಿದ್ದ ಅಪ್ಪಾಜಿಗೌಡರ ವಿರುದ್ಧ 17,131 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. ಹಾಲಿ ಶಾಸಕರಾಗಿ ಸಂಗಮೇಶ್ವರ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಲ್ಲದೇ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರು ಸಹ ಆಗಿದ್ದಾರೆ. ಈ ಭಾರಿ ಭದ್ರಾವತಿ ನಗರಸಭೆ ಕಾಂಗ್ರೆಸ್ ಹಿಡಿತದಲ್ಲಿದ್ದು, ಇದು ಅವರಿಗೆ ವರದಾನವಾಗುವ ಸಾಧ್ಯತೆಗಳಿವೆ.
ಕಳೆದ ಚುನಾವಣೆಗಳ ವಿವರ: 2008 ರಲ್ಲಿ ಕಾಂಗ್ರೆಸ್ನ ಸಂಗಮೇಶ್ ಅವರು ಜೆಡಿಎಸ್ನ ಅಪ್ಪಾಜಿ ಗೌಡ ಅವರ ವಿರುದ್ಧ ಕೇವಲ 487 ಮತಗಳ ಅಂತರದಿಂದ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರು ಸಂಗಮೇಶ್ ವಿರುದ್ಧ 44,099 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಹಾಲಿ ಜೆಡಿಎಸ್ನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದರು. ಇದರಿಂದ ಕಾಂಗ್ರೆಸ್ ಶಾಸಕರಾಗಿದ್ದ ಬಿ.ಕೆ.ಸಂಗಮೇಶ್ ಅವರು ಅಂದು ಕೆಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಸಿ.ಎಂ.ಇಬ್ರಾಹಿಂ ಅವರು ಅಂದು ಕೇವಲ 22,329 ಮತಗಳನ್ನು ಪಡೆದಿದ್ದರು. ಇನ್ನು 2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಸಂಗಮೇಶ್ ಅವರು ಜೆಡಿಎಸ್ ಶಾಸಕರಾಗಿದ್ದ ಅಪ್ಪಾಜಿಗೌಡರನ್ನು 11,567 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.