ಶಿವಮೊಗ್ಗ: ಇತ್ತಿಚೀನ ಕೆಲ ತೀರ್ಪುಗಳಿಂದ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆ ಆಗುತ್ತಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಭಿಪ್ರಾಯ ಪಟ್ಟಿದ್ದಾರೆ. ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು. ಶಾಸಕಾಂಗ, ಕಾರ್ಯಾಂಗದ ಮೇಲೆ ಜನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇನ್ನೂ ನಂಬಿಕೆ ಉಳಿಸಿಕೊಂಡಿರುವ ಅಂಗ ಅದು ನ್ಯಾಯಾಂಗವಾಗಿದೆ. ಇತ್ತಿಚೀನ ಕೆಲ ತೀರ್ಪುಗಳಿಂದಾಗಿ ನ್ಯಾಯಾಂಗದಲ್ಲೂ ವಿಶ್ವಾಸವನ್ನು ಕಳೆದುಕೊಳ್ಳುವ ಪ್ರಕ್ರಿಯೆ ಈ ದೇಶದಲ್ಲಿ ಪ್ರಾರಂಭವಾಗಿದೆ.
ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ನ್ಯಾಯಾಂಗದಲ್ಲಿರುವ ಲೋಪದೋಷಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ. ಜನರ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸುವ ಕೆಲಸ ಪ್ರಾರಂಭ ಮಾಡಬೇಕಿದೆ. ನ್ಯಾಯಾಂಗದ ಮೇಲೂ ಭರವಸೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ನ್ಯಾಯಾಂಗದ ಮೇಲೆ ಭರವಸೆ ಹೋದರೆ ಸಮಾಜದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದರು.
ಸಂವಿಧಾನ, ಕಾರ್ಯಾಂಗ ಹಾಗೂ ನ್ಯಾಯಾಂಗ ಸರಿಯಾಗಿ ಕೆಲಸ ಮಾಡಬೇಕಿದೆ. ಸಂವಿಧಾನದ ಅನುಷ್ಟಾನವನ್ನು ಸರಿಯಾಗಿ ಮಾಡಬೇಕಿದೆ. ಕಾರ್ಯಾಂಗ, ನ್ಯಾಯಾಂಗಗಳು ಈಗಲೂ ತಪ್ಪು ಮಾಡುತ್ತಿವೆ. ಮುಂದೆಯೂ ಅದು ಮುಂದುವರೆಯಬಹುದು. ಹಿಂದೆ ನಡೆದ ತಪ್ಪನ್ನು ಸರಿ ಮಾಡುವ ಕೆಲಸ ಮಾಡುತ್ತಿತ್ತು. ಅದು ಈಗ ಆಗುತ್ತಿಲ್ಲ. ಕೊಲೀಜಿಯಮ್ ವ್ಯವಸ್ಥೆ ಸರಿ ಅಲ್ಲ ಎಂದು ಜನ ಮಾತನಾಡಲು ಶುರು ಮಾಡಿದ್ದಾರೆ.
ಕೊಲೀಜಿಯಮ್ ವ್ಯವಸ್ಥೆಯಲ್ಲಿ ಲೋಪದೋಷಗಳಿಗೆ ಅದನ್ನು ಸರಿ ಪಡಿಸಬೇಕು, ಅದಕ್ಕೆ ನೀವೆಲ್ಲರೂ ಸಲಹೆ, ಸೂಚನೆ ಕೊಡಿ ಎಂದು ಸುಪ್ರೀಂ ಕೋರ್ಟ್ ಹೇಳಿತು. ಅದರಂತೆಯೇ ಹಲವರು ಸಲಹೆ ಸೂಚನೆಗಳನ್ನು ನೀಡಿದ್ರು. ಆದ್ರೆ ಇದುವರೆಗೂ ಆ ಸಲಹೆ ಸೂಚನೆಗಳು ಅಂತಿಮವಾಗಿಲ್ಲ. 513 ನ್ಯಾಯಾಧೀಶರ ನೇಮಕವಾಗಿದೆ. ಇದರಲ್ಲಿ ಶೇ79 ರಷ್ಟು ಸಾಮಾನ್ಯ ವರ್ಗಕ್ಕೆ ಸೇರಿದವರು. ಶೇ12 ರಷ್ಟು ಒಬಿಸಿ ವರ್ಗಕ್ಕೆ ಸೇರಿದವರು. ಶೇ 2.7 ಎಸ್ಸಿ, 1.3 ಎಸ್ಟಿ ಹಾಗೂ 2.6 ಅಲ್ಪ ಸಂಖ್ಯಾತರರು ಇದ್ದಾರೆ. ಇದು ಬಹುತ್ವದ ಭಾರತವನ್ನು ತೋರಿಸುತ್ತದೆಯೇ ಎಂದು ಪ್ರಶ್ನಿಸಿದರು.