ಬೆಂಗಳೂರು: ಯಾವುದೇ ಮೂಲಸೌಕರ್ಯ ನೀಡದಿದ್ದರೂ ನಿರ್ವಹಣಾ ಶುಲ್ಕ ವಿಧಿಸಿದ ಬಿಡಿಎ ನಡೆಯನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ ಪ್ರಗತಿಪರ ವೇದಿಕೆ ವಿರೋಧಿಸಿತ್ತು. ಇದೀಗ ಬಡಾವಣೆಯ ನಾಗರಿಕರ ಒತ್ತಡಕ್ಕೆ ಮಣಿದ ಬಿಡಿಎ ಕೊನೆಗೂ ನಿರ್ವಹಣಾ ಶುಲ್ಕ ರದ್ದುಪಡಿಸಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಳಿ ಸ್ವಚ್ಛತಾ ಸಿಬ್ಬಂದಿ ಇಲ್ಲದ ಕಾರಣ ಕೆಲವು ಲೇಔಟ್ಗಳು ಬಿಬಿಎಂಪಿ ವತಿಯಿಂದಲೇ ನಿರ್ವಹಣೆಯಾಗುತ್ತಿದೆ. ಆದರೆ, ಅವು ಇನ್ನೂ ಬಿಬಿಎಂಪಿಗೆ ಹಸ್ತಾಂತರ ಆಗದ ಕಾರಣ ಬಿಡಿಎ ಇದರ ಖರ್ಚು ನೀಡುತ್ತಿದೆ. ಹೀಗಾಗಿ ಜನರ ಮೇಲೆ ಈ ನಿರ್ವಹಣೆ ಶುಲ್ಕ ಹೊರಿಸಲಾಗಿದೆ. ಆದರೆ, ಕೆಂಪೇಗೌಡ ಬಡಾವಣೆ ಇನ್ನೂ ಅಭಿವೃದ್ಧಿಯಾಗದ ಕಾರಣ ಈ ಬಗ್ಗೆ ಬೋರ್ಡ್ ಸಭೆಯಲ್ಲಿ ತೀರ್ಮಾನವಾಗಿದ್ದು, ಈ ನಿರ್ವಹಣೆ ವೆಚ್ಚವನ್ನು ಕೆಂಪೇಗೌಡ ಬಡಾವಣೆಯಲ್ಲಿ ಸಂಗ್ರಹ ಮಾಡದೇ ಇರಲು ತೀರ್ಮಾನಿಸಲಾಗಿದೆ ಎಂದರು.