ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ಶಿವಮೊಗ್ಗ: ಕಾಂಗ್ರೆಸ್ನವರಿಗೆ ಸುಮಾರು 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ಅವರು ಉಡಾಫೆ ಮಾಡಿಕೊಂಡು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ನಮ್ಮ ಪಕ್ಷ ಬೆಳೆದಿದೆ. ಹಾಗಾಗಿ, ಪೈಪೋಟಿ ಇರುತ್ತದೆ. ಪೈಪೋಟಿ ಜಾಸ್ತಿ ಇದ್ದಾಗ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಟಿಕೆಟ್ ಅಂತಿಮಗೊಳಿಸಲು ದೆಹಲಿಯಲ್ಲಿ 7 ಮತ್ತು 8 ರಂದು ಸಭೆ ಸೇರುತ್ತೇವೆ. ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ಪಟ್ಟಿ ರೆಡಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿವಮೊಗ್ಗದಿಂದ ಹುಬ್ಬಳ್ಳಿಗೆ ಹೊರಟಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದವರಿಗೆ ಅಭ್ಯರ್ಥಿಗಳೇ ಇಲ್ಲದಾಗಿದೆ. ಇದರಿಂದ ನಮ್ಮ ಶಾಸಕರಿಗೆ ಕರೆ ಮಾಡಿ ನಿಮಗಾಗಿ ನಾವು ಟಿಕೆಟ್ ನೀಡುತ್ತೇವೆ. ಬನ್ನಿ, ನಿಮಗೆ ಟಿಕೆಟ್ ಕಾದಿರಿಸಿದ್ದೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರು ಕೇವಲ ಉಡಾಫೆ ಮಾಡಿಕೊಂಡು ಗೆಲ್ಲುತ್ತೇವೆ ಎನ್ನುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಬಹಳ ಹೀನಾಯವಾಗಿ ಸೋಲುತ್ತಾರೆ " ಎಂದು ಭವಿಷ್ಯ ನುಡಿದರು.
ಕೆ.ಎನ್ ರಾಜಣ್ಣ ಸುದೀಪ್ ಅವರನ್ನು ಪ್ರಚಾರಕ್ಕೆ ಕರೆಯುತ್ತೇನೆ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುದೀಪ್ ಅವರು ನಟರು. ಹಾಗಾಗಿ, ಅವರನ್ನು ಎಲ್ಲರೂ ಕರೆಯುತ್ತಾರೆ. ಹೋಗೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಅವರೇ ಹೇಳಿದ್ದಾರೆ, ನನ್ನ ಕಷ್ಟ ಕಾಲದಲ್ಲಿ ಯಾರೂ ಕೈ ಹಿಡಿಯಲಿಲ್ಲ. ಬೊಮ್ಮಾಯಿ ಅವರೇ ಕೈಹಿಡಿದಿದ್ದರು, ಹಾಗಾಗಿ ಸಹಾಯ ಮಾಡ್ತೀನಿ ಎಂದಿದ್ದಾರೆ ಅಂದರು.
ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಇರುವುದು ಗೊತ್ತೇ ಇದೆ. ಆಮೇಲೆ ಜೆಡಿಎಸ್ನಲ್ಲಿ ಹಾಸನ ಕ್ಷೇತ್ರಕ್ಕಾಗಿ ಒಳ ಜಗಳ ನಡೆಯುತ್ತಿದೆ. ಇದು ಅವರ ಕೌಟುಂಬಿಕ ವಿಚಾರ. ನಾನು ಅವರ ವಿಚಾರವಾಗಿ ಮಾಡನಾಡುವುದಿಲ್ಲ ಎಂದ ಅವರು, ಮಹೇಶ್ ಕುಮಟಳ್ಳಿ ಸೋಲಿನ ಕುರಿತು ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಜೊತೆ ಮಾತನಾಡಿದ್ದೇನೆ. ಅವರು ಡಿಸಿಎಂ ಆಗಿದ್ದವರು, ಎಲ್ಲವೂ ಅರ್ಥ ಆಗುತ್ತದೆ. ಪಕ್ಷದ ಹಿರಿಯ ನಾಯಕರಾದ ಅವರಿಗೂ ಜವಾಬ್ದಾರಿ ಇದೆ ಎಂದರು.
ಇದನ್ನೂ ಓದಿ :ಏ.8ಕ್ಕೆ ಬಿಜೆಪಿ ಸಂಸದೀಯ ಮಂಡಳಿ ಸಭೆ: ನಾಳೆ ಬಿಎಸ್ವೈ, ಬೊಮ್ಮಾಯಿ ದೆಹಲಿಗೆ
ದೆಹಲಿ ಭೇಟಿ: ಇಂದು ಮತ್ತೆ ನಾಳೆ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವದೆಹಲಿಗೆ ತೆರಳಲಿದ್ದಾರೆ. ಇಂದು ರಾತ್ರಿಯೇ ಮೊದಲ ಹಂತದ ಸಭೆ ನಡೆಯಲಿದ್ದು, ಏಪ್ರಿಲ್ 8 ರಂದು ಅಧಿಕೃತವಾಗಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಂಸದೀಯ ಮಂಡಳಿ ಸದಸ್ಯರು ಭಾಗಿಯಾಗಲಿದ್ದಾರೆ.