ಶಿವಮೊಗ್ಗ :ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಕಳೆದ ಒಂದು ವಾರದಿಂದ ಹಿಜಾಬ್ ಮತ್ತು ಕೇಸರಿ ಶಾಲು ಕುರಿತು ನಡೆಯುತ್ತಿರುವ ಘರ್ಷಣೆ ನಿಜಕ್ಕೂ ಆತಂಕ ಮೂಡಿಸಿದೆ ಎಂದು ಬಸವಕೇಂದ್ರದ ಡಾ.ಶ್ರೀ ಬಸವಮರುಳ ಸಿದ್ದ ಸ್ವಾಮೀಜಿ ಹೇಳಿದ್ದಾರೆ.
ಹಿಜಾಬ್ ಮತ್ತು ಕೇಸರಿ ಶಾಲು ವಿಚಾರವಾಗಿ ಡಾ.ಶ್ರೀ ಬಸವಮರುಳ ಸಿದ್ದ ಸ್ವಾಮೀಜಿ ಮಾತನಾಡಿರುವುದು.. ವಿದ್ಯಾರ್ಥಿಗಳು ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಸದೇ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ ವಿದ್ಯಾರ್ಥಿಗಳ ಸುಂದರ ಭವಿಷ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ಇಂತಹ ಕ್ಷೇತ್ರದಲ್ಲಿ ಕ್ಷುಲ್ಲಕ ವಿಚಾರಗಳ ಚರ್ಚೆ ನಡೆಯುತ್ತಿರುವುದು, ಅದರಲ್ಲಿ ವಿದ್ಯಾರ್ಥಿ ಸಮೂಹ ಭಾಗಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ದೇಶದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನವು ಮೂಲಭೂತ ಹಕ್ಕನ್ನು ನೀಡಿದೆ. ಅದರಲ್ಲಿ ನಮ್ಮ ಧಾರ್ಮಿಕ ವಿಚಾರ ಅನುಸರಿಸುವ ಹಕ್ಕನ್ನು ಸಹ ನೀಡಿದೆ. ಇವುಗಳನ್ನು ಪಾಲಿಸುವಲ್ಲಿ ಕೆಲ ಮಿತಿಗಳನ್ನು ಸಂವಿಧಾನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ವಿಧಿಸಿರುವ ವಸ್ತ್ರಸಂಹಿತೆಯನ್ನು ಪ್ರತಿಯೊಬ್ಬರು ಪಾಲನೆ ಮಾಡುವುದು ಅಗತ್ಯ ಮತ್ತು ಅನಿವಾರ್ಯ ಎಂದಿದ್ದಾರೆ.
ಇದು ಬಹಳ ಆಳವಾಗಿ ಮತ್ತು ದೀರ್ಘವಾಗಿ ಚರ್ಚೆ ಮಾಡುವ ವಿಷಯವಲ್ಲ. ಸಮಾನತೆಯ ಆಶಯಗಳು ಅನುಷ್ಠಾನಕ್ಕೆ ಬರಲು ಶಿಕ್ಷಣ ಕ್ಷೇತ್ರದಲ್ಲಿ ಸಮವಸ್ತ್ರ ಬೇಕೇಬೇಕು. ಇದನ್ನು ಅರಿತುಕೊಂಡು ವಿದ್ಯಾರ್ಥಿಗಳು ಸಂಯಮದಿಂದ ವರ್ತಿಸಬೇಕು ಎಂದು ತಿಳಿಸಿದ್ದಾರೆ.
ಓದಿ:ಪುನೀತ್ ರಾಜಕುಮಾರ್ ಕೊನೆಯ ಚಿತ್ರದ ಟೀಸರ್ ರಿಲೀಸ್.. ಹಾಲಿವುಡ್ ರೇಂಜ್ನಲ್ಲಿ ಮೂಡಿ ಬಂದ ಪವರ್ಸ್ಟಾರ್..